ಕೇರಳ: ಸಹೋದರನ ಜೊತೆ ಟೆರೆಸ್ ಮೇಲೆ ವ್ಯಾಯಾಮ ಮಾಡುತ್ತಿದ್ದ 18 ವರ್ಷದ ಯುವತಿಯೋರ್ವಳು 10ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ಗುರುವಾರ (ಆ.5) ನಡೆದಿದೆ.
ಐರಿನ್ ಜಾಯ್ ಮೃತಪಟ್ಟ ಯುವತಿ. ಈಕೆ ತನ್ನ ಪೋಷಕರೊಂದಿಗೆ ಶಾಂತಿ ತೊಟೆಕಟ್ ಎಸ್ಟೇಟ್ ಎಂಬ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಳು. ನಿನ್ನೆ ಮುಂಜಾನೆ ಎಂದಿನಂತೆ ತಮ್ಮ 10 ನೇ ಮಹಡಿಯಲ್ಲಿದ್ದ ಫ್ಲ್ಯಾಟ್ ನ ಟೆರೆಸ್ ಮೇಲೆ ಸಹೋದರನ ಜೊತೆ ವರ್ಕೌಟ್ ಮಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಗ್ರೌಂಡ್ ಫ್ಲೋರ್ ನಲ್ಲಿರುವ ಕಾರ್ ಪಾರ್ಕಿಂಗ್ ಜಾಗದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಈ ಕುರಿತು ಪ್ರಕರಣದ ದಾಖಲಿಸಿಕೊಂಡಿರುವ ಎರ್ನಾಕುಲಂನ ದಕ್ಷಿಣ ವಿಭಾಗದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿರುವುದಾಗಿ ಹೇಳಿದ್ದಾರೆ.
ರ್ನಾಕುಲಂನಲ್ಲಿ ಇಂತಹ ಘಟನೆ ನಡೆದಿರುವುದು ಇತ್ತೀಚಿನ ದಿನಗಳಲ್ಲಿ ಇದು ಎರಡನೆಯದ್ದು. ಕಳೆದ ಡಿಸೆಂಬರ್ನಲ್ಲಿ 55 ವರ್ಷದ ಮಹಿಳೆಯೊಬ್ಬರು 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇಮ್ತಿಯಾಜ್ ಅಹಮದ್ ಎಂಬ ವಕೀಲರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಕುಮಾರಿ ಎಂಬ ಮಹಿಳೆ ಮನೆ ಮಾಲೀಕ ಇಮ್ತಿಯಾಜ್ನ ಕಾಟ ತಾಳಲಾರದೆ ಪರಾರಿಯಾಗುವ ಯತ್ನದಲ್ಲಿ ದುರಂತ ಸಾವು ಕಂಡಿದ್ದಳು ಎನ್ನಲಾಗಿತ್ತು.
ಮನೆಯಿಂದ ಪರಾರಿಯಾಗುವ ಯತ್ನದಲ್ಲಿ 6ನೇ ಮಹಡಿಯಿಂದ ಸೀರೆಯೊಂದನ್ನು ಕೆಳಗೆ ಬಿಟ್ಟು, ಅದರ ಮೂಲಕ ಜಾರಿಕೊಂಡು ಬರುವಾಗ, ಸೀರೆ ತುಂಡಾಗಿ ಸೀದಾ ನೆಲಕ್ಕೆ ಬಿದ್ದಿದ್ದಳು. ನಾಲ್ಕಾರು ದಿನಗಳ ಚಿಕಿತ್ಸೆಯ ಬಳಿಕ ಆಕೆ ಮೃತಪಟ್ಟಿದ್ದಳು.