ತುಮಕೂರು: ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಮತ್ತು ಚೆನ್ನರಾಯ ದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕು ಎಂದು ಆಗ್ರಹಿಸಿ ಶ್ರೀ ಕ್ಷೇತ್ರದ ಸಿದ್ಧರಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ಬೈಕ್ ರ್ಯಾಲಿ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರ ಮೇಶ್ವರ್ ಅವರ ತವರು ಕ್ಷೇತ್ರದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುತ್ತಿದ್ದು, 18 ಗ್ರಾಮ ಗಳಿಗೆ ನೀರು ಹರಿಸಬೇಕೆಂದು ಸ್ವಾಮೀಜಿಯವರೇ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಚನ್ನರಾಯದುರ್ಗ ಹೋಬಳಿಯ 18 ಹಳ್ಳಿಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಬೈಕ್ ರ್ಯಾಲಿ ಮೂಲಕ ನಗರಕ್ಕೆ ಬಂದ ಪ್ರತಿಭಟನಾಕಾರರು ನಗರದಲ್ಲಿ ಪಾದಯಾತ್ರೆ ಮಾಡಿದರು.
ತೋವಿನಕೆರೆಯಿಂದ ಹೊರಟ ರ್ಯಾಲಿಯಲ್ಲಿ 18 ಗ್ರಾಮಗಳ ಮುಖಂಡರ, ರೈತರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ರ್ಯಾಲಿ ಅಂತ್ಯಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅವರಿಗೆ ಶ್ರೀಗಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
9 ವರ್ಷಗಳಿಂದ ನೀರಿಲ್ಲ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಬೆಟ್ಟ ಬಾಳೆಹೊನ್ನೂರು ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕೊರಟಗೆರೆ ಪಟ್ಟಣ ಹಾಗೂ ಮಾರ್ಗಮಧ್ಯದಲ್ಲಿ ಬರುವ ತೋವಿನಕೆರೆ ಸೇರಿದಂತೆ 17 ಹಳ್ಳಿಗಳಿಗೆ ಹೇಮಾವತಿ ನಾಲೆಯನ್ನು ಮೂಲವಾಗಿಸಿಕೊಂಡು ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಜೂರಾತಿ ನೀಡಿ 14 ವರ್ಷವಾಗಿದೆ. 9 ವರ್ಷದ ಹಿಂದೆಯೇ ಕೊರಟಗೆರೆಗೆ ನೀರು ಒದಗಿಸುವ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಅಗ್ರಹಾರ ಕೆರೆಗೆ ನೀರು ಬಿಡಲಾಗಿದೆ. ಆದರೆ, ಮಾರ್ಗಮಧ್ಯದಲ್ಲಿ ಬರುವ 18 ಹಳ್ಳಿಗಳಿಗೆ ನೀರು ಒದಗಿಸುವ ಯಾವುದೇ ಕೆಲಸ ಪ್ರಾರಂಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಮಗಾರಿ ಮುಗಿದರೂ ನೀರಿಲ್ಲ: ಭಾರತ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಂತ್ರಾಲಯದ ಜಂಟಿ ಸಲಹೆಗಾರರು ಪತ್ರದ ಮೂಲಕ 2005ರಲ್ಲಿ ತಾಂತ್ರಿಕ ಅನುಮೋದನೆ ನೀಡಿದ್ದಾರೆ. ಇದಕ್ಕೆ ರಾಜ್ಯ ಸರಕಾರದಿಂದಲೂ ಅನುಮೋದನೆ ದೊರಕಿದೆ. ಆದೇಶದನ್ವಯ ಕೊರಟಗೆರೆ ಹಾಗೂ ಮಾರ್ಗಮಧ್ಯದ 18 ಹಳ್ಳಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಹರಿಸಬೇಕು. ಕಾಮಗಾರಿ ಮಗಿದಿದೆ, ಎಲ್ಲಾ ಕೆರೆಗಳ ವಾಲ್‌ಗಳನ್ನು ಅಳವಡಿಸಲಾಗಿದೆ. ಆದರೆ, ಕೆರೆಗಳಿಗೆ ನೀರು ಮಾತ್ರ ಹರಿಸಿಲ್ಲ ಎಂದು ಅಳಲು ತೋಡಿಕೊಂಡರು.
ಈ ಭಾಗದಲ್ಲಿ ಅಂತರ್ಜಲದ ಮಟ್ಟ ಕುಸಿದಿದೆ. ಸುಮಾರು 1,200 ರಿಂದ 1,500 ಅಡಿ ಕೊಳವೆ ಬಾವಿ ಕೊರೆಸಿದರೂ, ಹನಿ ನೀರು ಸಿಗುತ್ತಿಲ್ಲ. ನೀರು ಸಿಕ್ಕರೂ, ಕುಡಿಯಲು ಯೋಗ್ಯವಾಗಿರುವುದಿಲ್ಲ. ರೈತರು ನೀರಿನ ಸಮಸ್ಯೆಯಿಂದ ತೋಟ ಹಾಗೂ ಇನ್ನಿತರ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಮಳೆಯಾಶ್ರಯ ಬಿಟ್ಟರೆ ಯಾವುದೇ ರೀತಿಯ ನೀರಿನ ಮೂಲಗಳು ಈ ಭಾಗದಲ್ಲಿ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಡಮರುಗ ಉಮೇಶ್, ವಾಲೆಚಂದ್ರಯ್ಯ, ಕಾಂತರಾಜು, ಸದಾಶಿವಯ್ಯ, ಸುಧಾ, ದಸಂಸ ರಾಜಾಧ್ಯಕ್ಷ ಡಾ.ನಾಗರಾಜ್, ಅರುಣ್, ಹೇಮಂತ್, ಸ್ವಾಮಿ, ನಾಗರಾಜಯ್ಯ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.