ಬೆಂಗಳೂರು: ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಮೊದಲ ಲಸಿಕೆ ನೀಡುವುದನ್ನು ಮೇ. 14 ರಿಂದ ತಾತ್ಕಾಲಿಕವಾಗಿ ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ರಾಜ್ಯದ ಎಲ್ಲ ಲಸಿಕಾ ಕೇಂದ್ರಗಳು ಈ ಆದೇಶವನ್ನು ಪಾಲಿಸಲು ಅರೋಗ್ಯ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಈಗಾಗಲೇ ಲಸಿಕೆ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಲು ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳಲಾಗಿದ್ದು, ಈಗ ರಾಜ್ಯದಲ್ಲಿ ಲಭ್ಯವಿರುವ ಲಸಿಕೆಯನ್ನು ಎರಡನೇ ಡೋಸ್ ನೀಡಲು ಮಾತ್ರ ಬಳಕೆ ಮಾಡಿಕೊಳ್ಳುವುದಾಗಿ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ಮೇ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ಜನರು ಆನ್ ಲೈನ್ ನಲ್ಲಿ ನೋಂದಣಿ ಮಾಡಿ ಆಸ್ಪತ್ರೆಗಳ ಎದರು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದರಿಂದ ಎಲ್ಲರಿಗೂ ಲಸಿಕೆ ಒದಗಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವುದರಿಂದ ಮೊದಲು 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಕೊಡಿಸುವುದನ್ನು ಪೂರ್ಣಗೊಳಿಸಲು ಸಿಎಂ ಸೂಚನೆ ನೀಡಿದ್ದಾರೆ
ರಾಜ್ಯ ಸರ್ಕಾರ ಈಗಾಗಲೇ 3 ಕೋಟಿ ಲಸಿಕೆ ಖರೀದಿಗೆ ಆದೇಶ ನೀಡಿದೆ. ಲಸಿಕೆ ಪೂರೈಸುವ ಕಂಪನಿಗಳು ನಿರೀಕ್ಷಿತ ಸಮಯದಲ್ಲಿ ಲಸಿಕೆ ಪೂರೈಸುವುದು ಕಷ್ಟವಾಗುತ್ತಿರುವುದರಿಂದ 18+ ವಯೋಮಾನದ 3.26 ಕೋಟಿ ಜನರಿಗೆ ಲಸಿಕೆ ಹಾಕಿಸುವುದು ಕಷ್ಟವಾಗಲಿದೆ ಎಂದು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
ಹೊಸ ಆ್ಯಪ್ ಅಭಿವೃದ್ಧಿ
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು 18+ ವಯೋಮಾನದವರು ತಾವಿರುವ ಪ್ರದೇಶ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭ್ಯವಿರುವ ಕಡೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಈಗಿರುವ ಆ್ಯಪ್ ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ನಿರ್ದಿಷ್ಟ ಪ್ರದೇಶದ ನಿರ್ಬಂಧ ಇಲ್ಲದಿರುವುದರಿಂದ ಈ ಸಮಸ್ಯೆ ಎದುರಾಗಿದ್ದು, ಅದನ್ನು ಬದಲಿಸಿ ಜನರು ಅವರು ವಾಸಿಸುವ ಪ್ರದೇಶದ ಸುತ್ತ ಮುತ್ತ ಇರುವ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ದೊರೆಯುಂತೆ ಹೊಸ ಆ್ಯಪ್ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ.