ಕಣ್ಣು ಹೊರಳುವ ಕಡೆಗೆ ಮನಸು ಜಾರುವುದು ಹರೆಯದ ವಯಸ್ಸಿನಲ್ಲಿ ಸಹಜ. ಆದರೆ ಹರೆಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಅರ್ಥವಾಗುವ ಹೊತ್ತಿಗೆ ಹಲವರ ಜೀವನದಲ್ಲಿ ನಡೆಯಬಾರದ್ದೇನೋ ನಡೆದು ಹೋಗಿರುತ್ತದೆ. ಸಾಮಾನ್ಯವಾಗಿ ಹದಿಹರೆಯದ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವುದು, ಅವರ ಯೋಚನೆಗಳನ್ನು ವಿವರಿಸುವುದು ಎರಡೂ ಕಷ್ಟ. ಅವೆರಡನ್ನೂ “18 ಟು 25′ ಸಿನಿಮಾದಲ್ಲಿ ಸೆರೆ ಹಿಡಿದು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು.
ಹೆಸರೇ ಹೇಳುವಂತೆ, “18 ಟು 25′ ಔಟ್ ಆ್ಯಂಡ್ ಔಟ್ ಯೂಥ್‌ಫುಲ್ ಸಬ್ಜೆಕ್ಟ್ ಸಿನಿಮಾ. 18 ರಿಂದ 25 ವರ್ಷ ವಯಸ್ಸಿನ ಹುಡುಗ – ಹುಡುಗಿಯರ ಮನಸ್ಸಿನಲ್ಲಿ ಮೂಡುವ ಭಾವನೆಗಳು, ಅವರ ಯೋಚನೆಗಳ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಲವ್, ರೊಮ್ಯಾನ್ಸ್, ಆ್ಯಕ್ಷನ್, ಎಮೋಶನ್, ಹಾಡು, ಡ್ಯಾನ್ಸ್ ಹೀಗೆ ಎಲ್ಲ ಎಂಟರ್ ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಇನ್ನು ಬಹುತೇಕ ಹೊಸ ಪ್ರತಿಭೆಗಳೇ “18 ಟು 25′ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಗಳಿಗೆ ಕೈಲಾದ ಪರಿಶ್ರಮ ಹಾಕಿರುವುದು ಪ್ರತಿ ದೃಶ್ಯಗಳಲ್ಲೂ ಕಾಣುತ್ತದೆ. ಒಂದೆರಡು ಹಾಡುಗಳು ಗುನುಗುವಂತಿದ್ದು, ಚಿತ್ರದ ಛಾಯಾಗ್ರಹಣ ದೃಶ್ಯಗಳನ್ನು ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದೆ.
ಯೂಥ್ ಮತ್ತು ಫ್ಯಾಮಿಲಿ ಆಡಿಯನ್ಸ್ ಸೆಳೆಯುವಂತಹ ಒಂದಷ್ಟು ಅಂಶಗಳು ಸಿನಿಮಾದಲ್ಲಿರುವುದರಿಂದ, ಹರೆಯದ ಮನಸುಗಳ ಪಿಸುಮಾತಿನ ಕಿವಿ ಕೊಡಲು ಇಷ್ಟವಿರುವವರು ವಾರಾಂತ್ಯದಲ್ಲಿ “18 ಟು 25′ ಸಿನಿಮಾವನ್ನು ಒಮ್ಮೆ ನೋಡಿ ಬರಬಹುದು.
ಜಿಎಸ್‌ಕೆ