Advertisement

ವಿವಿಧ ಕಳ್ಳತನ ಪ್ರಕರಣದಲ್ಲಿ 18 ಮಂದಿ ಬಂಧನ

12:09 PM Oct 07, 2017 | Team Udayavani |

ಬೆಂಗಳೂರು: ಮನೆ ಕಳವು, ಮೊಬೈಲ್‌, ಪ್ರಯಾಣಿಕರ ಸೊಗಿನಲ್ಲಿ ಚಿನ್ನಾಭರಣ ಹಾಗೂ ಸರ ಕಳವು ಮಾಡುತ್ತಿದ್ದ 18 ಮಂದಿ ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿ, 1.07 ಕೋಟಿ ರು.ಮೌಲ್ಯದ ಚಿನ್ನಾಭರಣ, 57 ಮೊಬೈಲ್‌, 4 ದ್ವಿಚಕ್ರ ವಾಹನ ಹಾಗೂ 2.30 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

Advertisement

ಕುದುರೆ ರೇಸ್‌ಗೆ ಹಣ ಹೂಡಿಕೆ ಮಾಡಲು ಪಲ್ಸರ್‌ ಬೈಕ್‌ ಖರೀದಿಸಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ ಕಳವು ಮಾಡುತ್ತಿದ್ದ ಇಬ್ಬರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಮಹೇಂದ್ರರಾವ್‌ ಮತ್ತು ಹರೀಶ್‌ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 34.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 4 ಪಲ್ಸರ್‌ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹೇಂದ್ರರಾವ್‌ ರೇಸ್‌ಕೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಆಗಾಗ್ಗೆ ರೇಸ್‌ಕೋರ್ಸ್‌ಗೆ ಬರುತ್ತಿದ್ದ ಹರೀಶ್‌ನನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ಕುದುರೆ ಜೂಜಿನ ಮೋಹಕ್ಕೆ ಬಿದಿದ್ದು, ಸರ ಕಳವು ಮಾಡಲು ಸಂಚು ರೂಪಿಸಿ, ಅದಕ್ಕಾಗಿಯೇ ಪಲ್ಸರ್‌ ಬೈಕ್‌ ಖರೀದಿಸಿದ್ದಾರೆ. ಬಳಿಕ ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ, ಹಿಂಬಾಲಿಸಿ ಚಿನ್ನದ ಸರ ಕಿತ್ತುಕೊಮಡು ಪರಾರಿಯಾಗುತ್ತಿದ್ದರು.

ನಂತರ ಕದ್ದ ಸರವನ್ನು ಹರೀಶ ಚಿನ್ನದ ಅಂಗಡಿಯಲ್ಲಿ ಪರಿಚಯಸ್ಥ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣವನ್ನು ಕುದುರೆ ರೇಸ್‌ಗೆ ಕಟ್ಟುತ್ತಿದ್ದರು. ಮೋಜಿನ ಜೀವನಕ್ಕೆ ಸರಕಳವು ಮಾಡುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮನೆ ಗಳವು: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆ ನಿವಾಸಿ ಸತೀಶ್‌ ಬಂಧಿತ. ಆತನಿಂದ 13.59 ಲಕ್ಷ ಬೆಲೆ ಬಾಳುವ 452 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Advertisement

ಜೇಬು ಕಳ್ಳತನ: ಸಾರ್ವಜನಿಕ ಸ್ಥಳಗಳಲ್ಲಿ ಜೇಬು ಕಳ್ಳತನ ಮಾಡುತ್ತಿದ್ದ ಏಳು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ, ಕಿರಣ್‌,  ಶ್ರೀನಿವಾಸ, ರವಿ, ಹರೀಶ್‌, ಸುನಿಲ್‌, ಶಿವಮೂರ್ತಿ ಮತ್ತು ವಿಜಿ ಬಂಧಿತರು. ಅವರಿಂದ 6.50 ಲಕ್ಷ ರೂ. ಬೆಲೆಯ ವಿವಿಧ ಕಂಪೆನಿಗಳ 57 ಪೋನ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಸಿಟಿ ಮಾರ್ಕೆಟ್‌, ಗಾಂಧಿಬಜಾರ್‌ ಸೇರಿದಂತೆ  ಮತ್ತಿತರ ಕಡೆ ಜನಸಂದಣಿ ಇರುವ ಸ್ಥಳಗಳಲ್ಲಿ ಜೇಬು ಕಳ್ಳತನ ಮಾಡುತ್ತಿದ್ದರು. ಮತ್ತೂಂದು ಪ್ರಕರಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್‌ನಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ರವಿ, ಮನುಕುಮಾರ್‌ ಹಾಗೂ ಶಂಕರ್‌ ಬಂಧಿತರು.

ಆರೋಪಿಗಳು ಕದ್ದಿರುವ ಚಿನ್ನದ ಒಡವೆ ಸ್ವೀಕರಿಸಿ ಕಳವು ಮಾಡಲು ಸಹಕರಿಸುತ್ತಿದ್ದ ಚಿತ್ತೂರು ಮೂಲದ ರಮೇಶ್‌ನನ್ನು ಬಂಧಿಸಿ ಆತನಿಂದ 1.38 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಹಾಗೂ ಬಸ್‌ ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರನ್ನು ಉಪ್ಪಾರ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಯಾಜ್‌ ಮತ್ತು ಆಸೀಫ್ ಹುಸೇನ್‌ ಬಂಧಿತರು. ಬಂಧಿತರಿಂದ ಸುಮಾರು 12 ಲಕ್ಷ ರೂ. ಬೆಲೆಯ 400 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನು ಮನೆಗಳ್ಳತನ ಮಾಡುತ್ತಿದ್ದ ಕಾಟನ್‌ಪೇಟೆಯ ಜಹೀರ್‌ ಎಂಬುವವನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ 368 ಗ್ರಾಂ ಬೆಲೆಯ 8,20 ಲಕ್ಷ ರೂ. ಹಾಗೂ 5 ಸಾವಿರ ನಗದನ್ನು ವಶಪಡಿಕೊಂಡಿಸಿದ್ದಾರೆ.

ಮೊಬೈಲ್‌ ಕಳ್ಳನ ಬಂಧನ: ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುತ್ತ ಮೊಬೈಲ್‌ಗ‌ಳನ್ನು ಕಳವು ಮಾಡುತ್ತಿದ್ದ ಭದ್ರಾವತಿ ಮೂಲದ ಪ್ರೇಮ್‌ ಕುಮಾರ್‌ನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ 2.25 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಜನಸಂದಣಿ ಇರುವ ಬಸ್‌ಗಳನ್ನು ಹತ್ತಿ ಸಾರ್ವಜನಿಕರಿಂದ ಜೇಬುಗಳಿಗೆ ಕತ್ತರಿ ಹಾಕಿ ಹಣ, ಪರ್ಸ್‌, ಮೊಬೈಲ್‌ ಮತ್ತಿತ್ತರ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next