ನವದೆಹಲಿ/ಚಮೋಲಿ:ದೇವಭೂಮಿ ಎಂದು ಖ್ಯಾತಿಪಡೆದಿರುವ ಉತ್ತರಾಖಂಡದಲ್ಲಿ ರವಿವಾರ ಸಂಭವಿಸಿದ ಭಾರೀ ನೀರ್ಗಲ್ಲು ಸ್ಫೋಟದಿಂದ ಪ್ರವಾಹ ಉಂಟಾಗಿದ್ದು, 200ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿದ್ದಾರೆಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಕೃಷಿ ಕಾಯ್ದೆ; ಮನಮೋಹನ್ ಸಿಂಗ್ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಗೆ ಪ್ರಧಾನಿ ಮೋದಿ ತಿರುಗೇಟು
ನೀರ್ಗಲ್ಲು ಸ್ಫೋಟದ ರಭಸಕ್ಕೆ ಪವಿತ್ರ ನದಿಗಳಾಗಿರುವ ಅಲಕಾನಂದ, ಧೌಲಿಗಂಗಾ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಿದ್ದು, ಹೀಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪ್ರವಾಹದ ರಭಸಕ್ಕೆ ಖಾಸಗಿ ಕಂಪನಿ ನಿರ್ಮಿಸುತ್ತಿದ್ದ ವಿದ್ಯುತ್ ಘಟಕ ಹಾಗೂ 5 ಸೇತುವೆಗಳು ಕೊಚ್ಚಿಕೊಂಡು ಹೋಗಿದೆ.
13 ಗ್ರಾಮದಲ್ಲಿರುವ ಸುಮಾರು 2,500 ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರವಾಹದ ಬಿರುಸಿಗೆ ಬಹುತೇಕ ರಸ್ತೆಗಳು ನಾಮಾವಶೇಷವಾಗಿದೆ ಎಂದು ಉತ್ತರಾಖಂಡ್ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಪ್ರವಾಹದಿಂದಾಗಿ ರಸ್ತೆ ಕೊಚ್ಚಿಕೊಂಡು ಹೋಗಿ ಸಿಲುಕಿರುವ ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರದ ಪೊಟ್ಟಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.
ಎನ್ ಟಿಪಿಸಿ ಪ್ಲ್ಯಾಂಟ್ ನ 148 ಉದ್ಯೋಗಿಗಳು ಮತ್ತು ರಿಷಿಗಂಗಾದ 22 ಮಂದಿ ಸೇರಿದಂತೆ ಸುಮಾರು 200 ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣಾ ತಂಡ ಹೊರತೆಗೆಯುವ ಕಾರ್ಯದಲ್ಲಿ ತೊಡಗಿದೆ. ಈವರೆಗೆ 18 ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.
2013ರಲ್ಲಿ 6 ಸಾವಿರ ಮಂದಿ ಸಾವು:
2013ರಲ್ಲಿ ಉತ್ತರಾಖಂಡ್ ನಲ್ಲಿ ಸಂಭವಿಸಿದ ಭಾರೀ ನೀರ್ಗಲ್ಲು ಸ್ಫೋಟದಿಂದ ಸಂಭವಿಸಿದ ಪ್ರವಾಹದಿಂದಾಗಿ ಸುಮಾರು 6000 ಮಂದಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ರಿಷಿ ಗಂಗಾ ಡ್ಯಾಂ ಸೇರಿದಂತೆ ರಾಜ್ಯದಲ್ಲಿ ಮುಖ್ಯವಾಗಿ ನಿರ್ಮಾಣ ಮಾಡುತ್ತಿದ್ದ ಅಭಿವೃದ್ದಿ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು.