Advertisement

Politics: “ಟಾರ್ಗೆಟ್‌ 25” ಬೆನ್ನತ್ತಿರುವ ಬಿಜೆಪಿಗೆ 18 ಸವಾಲು

10:54 PM Jan 11, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ “ಟಾರ್ಗೆಟ್‌ 25” ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಬಿಜೆಪಿಗೆ ಅಂದುಕೊಂಡಷ್ಟು ಸ್ಥಾನದಲ್ಲಿ ಜಯ ಸಾಧಿಸುವುದು ಸರಳವಲ್ಲ! ಬಿಜೆಪಿಯ ಒಳಮನೆಯ ಲೆಕ್ಕಾಚಾರವೇ ಈ ರೀತಿ ಇದ್ದು, ಸವಾಲುಗಳನ್ನು ಎದುರಿಸುವುದಕ್ಕೆ ಇರುವ ಸಮಯದಲ್ಲೇ ಪರಿಹಾರ ಹುಡುಕಬೇಕಾದ ಅನಿವಾರ್ಯತೆ ಕೇಸರಿ ಪಾಳಯಕ್ಕೆ ಎದುರಾಗಿದೆ.

Advertisement

8ರಿಂದ 9 ಕ್ಷೇತ್ರಗಳಲ್ಲಿ ಸ್ವಲ್ಪ ಸಮಸ್ಯೆ ಇದೆ. ಆದರೂ ತೊಂದರೆ ಇಲ್ಲ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹೊರವಲಯದಲ್ಲಿ ನಡೆಸಿದ ಸಭೆಯಲ್ಲಿ ವಾಸ್ತವ ಬೇರೆ ಇದೆ ಎಂಬ ಸತ್ಯ ಮನದಟ್ಟಾಗಿದೆ. ಹೀಗಾಗಿ ಹೊಸ ಪ್ರಯೋಗಕ್ಕೆ ಮುಂದಾಗಬೇಕೋ ಅಥವಾ ಹಾಲಿ ಸಂಸದರಿಗೆ ಇನ್ನೊಮ್ಮೆ ಅವಕಾಶ ನೀಡಬೇಕೋ ಎಂಬ ಗೊಂದಲ ಸೃಷ್ಟಿಯಾಗಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ ಹೆಗಲಿಗೆ ಬಿಡುವುದೇ ಕ್ಷೇಮ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ.

ಬಿಜೆಪಿಗೆ ಈ ಚುನಾವಣೆಯಲ್ಲಿ ಮೂರು ರೀತಿಯ ಸವಾಲು ಎದುರಾಗಿದೆ. ಮೊದಲನೆಯದಾಗಿ ಹಾಲಿ ಸಂಸದರನ್ನು ಬದಲಾಯಿಸಿ ಎಂಬ ಕಾರ್ಯಕರ್ತರು- ಮುಖಂಡರ ಕೂಗು. ಈ ಪಟ್ಟಿ ಬಹಳ ದೊಡ್ಡದಿದೆ. ಇನ್ನೊಂದು ನಿವೃತ್ತಿ ಘೋಷಿಸಿದ ಕ್ಷೇತ್ರ. ಮೂರನೆಯದು ನಿರಾಸಕ್ತಿ.

ಬದಲಾವಣೆಯ ಕೂಗೆಲ್ಲಿ ?
ಎರಡು ದಿನಗಳ ಸಭೆಗೂ ಮುನ್ನವೇ ಹಲವು ಕ್ಷೇತ್ರಗಳಲ್ಲಿ ಬದಲಾವಣೆಯ ಬೇಡಿಕೆ ಇತ್ತು. ಆದರೆ ಆ ಪಟ್ಟಿ ಇಷ್ಟು ದೊಡ್ಡದಾಗಬಹುದೆಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಈಗ ಲಭ್ಯವಾದ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ- ಚಿಕ್ಕಮಗಳೂರು, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಬೀದರ್‌, ಬೆಳಗಾವಿ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದಿಂದ ಬದಲಾವಣೆಯ ಬೇಡಿಕೆ ವ್ಯಕ್ತವಾಗಿದೆ. ಸುಮಾರು 11ಕ್ಷೇತ್ರಗಳಲ್ಲಿ ಇಂಥ ಬೇಡಿಕೆಯಿದೆ. ರಾಜ್ಯ ನಾಯಕರು ಹಾಗೂ ವರಿಷ್ಠರ ಮಧ್ಯಸ್ಥಿಕೆಯಿಂದ ವಿವಾದ ಕೊನೆಗೊಳ್ಳಬಹುದಾದರೂ ಸಂಧಾನ ಪ್ರಕ್ರಿಯೆ ನಡೆಸಲೇಬೇಕಾದ ಪರಿಸ್ಥಿತಿ ಇದೆ.

ಕೆಲವರ ನಿವೃತ್ತಿ ಮಾತು, ಹಲವರ ನಿರಾಸಕ್ತಿ
ಚಾಮರಾಜನಗರ ಸಂಸದ ಶ್ರೀನಿವಾಸ್‌ ಪ್ರಸಾದ್‌, ತುಮಕೂರು ಸಂಸದ ಜಿ.ಎಸ್‌. ಬಸವರಾಜ್‌ ಚುನಾವಣ ನಿವೃತ್ತಿ ಘೋಷಿಸಿದ್ದು, ಚಿಕ್ಕಬಳ್ಳಾಪುರ ಸಂಸದ ಬಿ.ಎನ್‌. ಬಚ್ಚೇಗೌಡ ಬಿಜೆಪಿಯಿಂದಲೇ ವಿಮುಖರಾಗಿದ್ದಾರೆ. ಹೀಗಾಗಿ ಈ ಮೂರು ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಘೋಷಿಸಬೇಕಾಗಿದೆ. ಚುನಾವಣ ರಾಜಕಾರಣದಿಂದ ದೂರ ಎಂದು ನಿವೃತ್ತಿಯ ಮಾತನಾಡಿದ್ದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, “ಕಾರ್ಯಕರ್ತರ ಒತ್ತಾಯ” ಎಂಬ ದಾಳ ಉರುಳಿಸಿದ್ದಾರೆ. ಒಂದರ್ಥದಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಗುಡ್‌ಬೈ ಎಂಬ ನಿರ್ಧಾರದಿಂದ ಯೂಟರ್ನ್ ಹೊಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟವರೆಲ್ಲರೂ ತಮ್ಮದೇ ಆದ ಮೂಲದಿಂದ ಲಾಬಿ ಪ್ರಾರಂಭಿಸಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಇನ್ನು ಹಾವೇರಿ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರು ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ. ಆದರೆ ಇಲ್ಲಿ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ. ಹಾವೇರಿ ಲೋಕಸಭಾ ಕ್ಷೇತ್ರದ ಮೇಲೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪುತ್ರ ಕಾಂತೇಶ್‌ ಕಣ್ಣಿಟ್ಟಿದ್ದಾರೆ. ತಮ್ಮ ಪುತ್ರನಿಗೆ ಟಿಕೆಟ್‌ ಪಡೆಯುವುದಕ್ಕಾಗಿ ಈಶ್ವರಪ್ಪ ದಿಲ್ಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ.

Advertisement

17 ಕ್ಷೇತ್ರಗಳಲ್ಲಿ ಬಿಜೆಪಿಗೆ ಸವಾಲು
ಒಟ್ಟಾರೆಯಾಗಿ 17 ಕ್ಷೇತ್ರದಲ್ಲಿ ಬಿಜೆಪಿಗೆ ಸವಾಲು ಎದುರಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಕೆಲವರನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದಲೇ ಪಕ್ಷಕ್ಕೆ ಕರೆ ತರಲಾಗಿದೆ. ವಿಧಾನ ಸಭಾ ಚುನಾವಣೆಯಲ್ಲಿ ಸೋತ ಸಿ.ಟಿ.ರವಿ ಉಡುಪಿ- ಚಿಕ್ಕಮಗಳೂರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ನಿಶ್ಚಿಯವಾಗಿರುವುದರಿಂದ ಹಾಲಿ ಸಂಸದೆ ಸುಮಲತಾ ಅವರಿಗೆ ಪರ್ಯಾಯ ಮಾರ್ಗ ತೋರಬೇಕಿದೆ. ಹೀಗಾಗಿ ಟಾರ್ಗೆಟ್‌ 25 ಗುರಿಯೊಂದಿಗೆ ದೌಡಾಯಿಸುತ್ತಿರುವ ಬಿಜೆಪಿಗೆ 18 ಸವಾಲು ಎದುರಾಗಿದೆ.

 ರಾಘವೇಂದ್ರ ಭಟ್‌

 

Advertisement

Udayavani is now on Telegram. Click here to join our channel and stay updated with the latest news.

Next