Advertisement

18-20 ಹಾಲಿ ಅಸಮರ್ಥ ಬಿಜೆಪಿ ಶಾಸಕರಿಗೆ ಕೊಕ್‌?

10:59 PM May 01, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಟಾರ್ಗೆಟ್‌ ಇಟ್ಟುಕೊಂಡಿರುವ ಬಿಜೆಪಿಯಲ್ಲಿ 20 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ಕೊಕ್‌ ನೀಡುವ ಸಾಧ್ಯತೆ ಇದೆ.

Advertisement

ರಾಜ್ಯದಲ್ಲಿ ಚುನಾವಣ ಪೂರ್ವ ಮೊದಲ ಹಂತದಲ್ಲಿ ಮೂರು ತಂಡಗಳಲ್ಲಿ ಪ್ರವಾಸ ನಡೆಸಿದ ಮೂರು ತಂಡಗಳಿಗೆ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಕ್ಷೇತ್ರಗಳಲ್ಲಿ ಶಾಸಕರುಗಳ ಬಗ್ಗೆ ವ್ಯಕ್ತವಾದ ಅಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಷದ ನಾಯಕರು ಅಂತಹ ಅಸಮರ್ಥ ಶಾಸಕರ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವರುಗಳ ಗುಪ್ತ ಮೌಲ್ಯಮಾಪನ
ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ಹೈಕಮಾಂಡ್‌ ಈಗಿನಿಂದಲೇ ಎಲ್ಲ ರೀತಿಯ ಕಾರ್ಯತಂತ್ರ ರೂಪಿಸು ತ್ತಿದ್ದು, ಅದರ ಮೊದಲ ಭಾಗವಾಗಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದ ಮೂರು ತಂಡಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸಾಧನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಹಾಲಿ ಶಾಸಕರು ಮತ್ತು ಸಚಿವರುಗಳ ಕಾರ್ಯವೈಖರಿಯ ಗುಪ್ತ ಮಾಹಿತಿ ಪಡೆದುಕೊಂಡಿದ್ದಾರೆ.

ಅಸಮರ್ಥ ಶಾಸಕರ ಮಾಹಿತಿ
ರಾಜ್ಯ ನಾಯಕರುಗಳ ಮೂರು ತಂಡಗಳು ಪ್ರತ್ಯೇಕವಾಗಿ ಪ್ರವಾಸ ನಡೆಸಿ, ಪ್ರತೀ ವಿಭಾಗ ಮಟ್ಟದಲ್ಲಿಯೂ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪಕ್ಷದ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಪ್ರತಿಯೊಬ್ಬ ಹಾಲಿ ಶಾಸಕರು
ಗಳು ಕ್ಷೇತ್ರದಲ್ಲಿ ಶಾಸಕರಾಗಿ ಮಾಡಿರುವ ಕಾರ್ಯಗಳು, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶಾಸಕರ ಪಾತ್ರ, ಶಾಸಕರು ಜನರೊಂದಿಗೆ ಬೆರೆಯುವುದು, ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಹಾಗೂ ಪಕ್ಷದ ಸಂಘಟನೆಯಲ್ಲಿ ಶಾಸಕರ ಕೊಡುಗೆ ಏನು ಎನ್ನುವ ಹಲವಾರು ವಿಚಾರಗಳ ಆಧಾರದ ಮೇಲೆ ಪ್ರತಿಯೊಬ್ಬ ಶಾಸಕರ ಮಾಹಿತಿ ಸಂಗ್ರಹಿಸಿದ್ದು, ಮೂರು ತಂಡಗಳ ಪ್ರವಾಸದ ಸಂದರ್ಭ ಅಂತಿಮವಾಗಿ 18ರಿಂದ 20 ಶಾಸಕರು ನಿರೀಕ್ಷಿತ ಮಟ್ಟದಲ್ಲಿ ಶಾಸಕರಾಗಿ ಜನರ ಸಂಪರ್ಕ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಟಿಕೆಟ್‌ ನೀಡದಂತೆ ಸ್ಥಳೀಯರಿಂದಲೇ ಸಲಹೆ
ಪ್ರಸ್ತುತ 119 ಶಾಸಕರನ್ನು ಹೊಂದಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರಬೇಕಾದರೆ ಪ್ರತಿಯೊಂದು ಕ್ಷೇತ್ರವೂ ಅತ್ಯಂತ ಮಹತ್ವದ್ದಾಗಿದ್ದು, ಹೀಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಪ್ರತಿಯೊಬ್ಬ ಶಾಸಕರ ಕಾರ್ಯವೈಖರಿ ಮತ್ತು ಅವರ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಜನರಲ್ಲಿ ಇರುವ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿ ಅನಂತರ ಟಿಕೆಟ್‌ ನೀಡಲು ಮುಂದಾಗಿದ್ದಾರೆ. ಇತ್ತೀಚೆಗೆ ನಾಯಕರುಗಳು ತಂಡಗಳಲ್ಲಿ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭ ಕೆಲವು ಶಾಸಕರ ಕಾರ್ಯವೈಖರಿ ಮತ್ತು ಸಾರ್ವಜನಿಕರೊಂದಿಗೆ ಬೆರೆಯದಿರುವ ಬಗ್ಗೆ ಸ್ಥಳೀಯ ನಾಯಕರೇ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಅವರಿಗೆ ಟಿಕೆಟ್‌ ನೀಡಿದರೆ ಪಕ್ಷ ಗೆಲ್ಲುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಅಂತಹ ಶಾಸಕರುಗಳ ಪಟ್ಟಿಯನ್ನು ರಾಜ್ಯ ನಾಯಕರುಗಳು ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಸೋತ ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ
ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಪ್ರಸ್ತುತ 103 ಕ್ಷೇತ್ರಗಳಲ್ಲಿ ಪಕ್ಷದ ಶಾಸಕರನ್ನು ಹೊಂದಿಲ್ಲ. ಅಂತಹ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತಿರುವ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವೇನು. ಈ ಬಾರಿ ಆ ವ್ಯಕ್ತಿ ಕ್ಷೇತ್ರದಲ್ಲಿ ಜನರೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಂತಹ ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಅಭ್ಯರ್ಥಿಗಳನ್ನು ಕರೆತರಬಹುದಾ ಅಥವಾ ಪಕ್ಷದಲ್ಲಿ ಬೇರೆ ಸಮರ್ಥ ಅಭ್ಯರ್ಥಿಗಳಿದ್ದಾರೆ ಎನ್ನುವ ಕುರಿತಂತೆಯೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

-ಶಂಕರ ಪಾಗೋಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next