Advertisement
2007 ಆಗಸ್ಟ್ 23 ರಂದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಡಿಸಿ ರಾಮನಗರ ಜಿಲ್ಲೆಯನ್ನು ಸ್ಥಾಪಿಸಿದರು. ರಾಮನಗರವನ್ನು ಜಿಲ್ಲಾ ಕೇಂದ್ರವಾಗಿಸಿಕೊಂಡು ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕುಗಳನ್ನು ಒಳಗೊಂಡ ನೂತನ ಜಿಲ್ಲೆ ಹೊಸದಾಗಿ ರಚನೆಯಾಗಿರುವ ಹಾರೋಹಳ್ಳಿ ತಾಲೂಕು ಸೇರಿದಂತೆ 5 ತಾಲೂಕುಗಳು, 127 ಗ್ರಾಪಂಗಳು,18 ಹೋಬಳಿಗಳನ್ನು ಒಳಗೊಂಡಿದ್ದು, 2011ರ ಜನಗಣತಿ ಪ್ರಕಾರ ಜಿಲ್ಲೆಯ 10,82,739 ಜನರನ್ನು ಒಳಗೊಂಡಿದೆ. ಇತ್ತೀಚಿಗೆ ನೀತಿ ಆಯೋಗ ಬಿಡುಗಡೆ ಮಾಡಿ ರುವ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಅತಿ ಕಡಿಮೆ ಬಡವರನ್ನು ಒಳಗೊಂಡಿರುವ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ.
Related Articles
Advertisement
ಜಿಲ್ಲಾ ಕೇಂದ್ರದಲ್ಲಿ ನಾಲ್ಕು ಬೃಹತ್ ಕಟ್ಟಡಗಳು ತಲೆ ಎತ್ತಿವೆಯಾದರೂ ಸಾಕಷ್ಟು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಿಂದೆ ಜಿಲ್ಲಾಧಿಕಾರಿ ಕಚೇರಿಯಾಗಿದ್ದ ಕಂದಾಯ ಭವನ ಭೂತಬಂಗಲೆಯಾಗಿ ಉಳಿದಿದೆ. ಕಂದಾಯ ಭವನವನ್ನು ಸುಸ್ಥಿತಿಗೊಳಿಸಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳನ್ನು ಇಲ್ಲಿಗೆ ವರ್ಗಾವಣೆ ಮಾಡುವ ಕೆಲಸ ಇನ್ನೂ ನಡೆಯದಿದೆ.
ಶ್ರೀಸಾಮಾನ್ಯರಿಗೆ ಅನುಕೂಲ:
ರಾಮನಗರ ಜಿಲ್ಲೆ ಪ್ರಾರಂಭದಲ್ಲಿ ಬೆಂಗಳೂರು ಬ್ರಾಂಡ್‌ನಿಂದ ನಮ್ಮ ಭಾಗದ ತಾಲೂಕುಗಳು ಹೊರ ಬರುತ್ತಿವೆ. ಎಂಬ ಅಪಸ್ವರಗಳು ಕೇಳಿಬಂದಿತಾದರೂ, ರಾಮನಗರ ಜಿಲ್ಲಾ ಕೇಂದ್ರವಾಗಿ ಘೋಷಣೆಯಾದ ಬಳಿಕ ಜನರ ಸಮೀಪಕ್ಕೆ ಜಿಲ್ಲಾಡಳಿತ ಬಂದಂತಾಗಿದೆ. ಜಿಲ್ಲಾ ಮಟ್ಟದ ಕಚೇರಿಗಳ ಕೆಲಸಕ್ಕಾಗಿ ಜನತೆ ಬೆಂಗಳೂರಿನ ವರೆಗೆ ಅಲೆದಾಡುವುದು ತಪ್ಪಿದಂತಾಗಿದೆ. ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತ್ವರಿತವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಲು ಜನತೆಗೆ ಸಹಕಾರಿಯಾಗಿದೆ.
ಡಿಸಿಎಂ ತವರು ಜಿಲ್ಲೆ :
ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಯಾಗಿರುವ ರಾಮನಗರ ಜಿಲ್ಲೆ 16 ವರ್ಷ ಪೂರೈಸಿದ್ದು, ಉಪ ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿ ಹೆಚ್ಚಿನ ಕೊಡುಗೆ ನೀಡುವರೇ ಎಂಬ ನಿರೀಕ್ಷೆ ಜನತೆಯದ್ದಾಗಿದೆ. ಜಿಲ್ಲೆಯ ಕೃಷಿ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಹೀಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಯನ್ನು ನೀಡುವ ಜೊತೆಗೆ ರಾಮನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ಆಗಬೇಕಿರುವುದೇನು..?
- ಮೇಕೆದಾಟು ಅಣೇಕಟ್ಟೆ ಯೋಜನೆ ಅನುಷ್ಠಾನಗೊಳ್ಳಬೇಕು
- ರಾಜೀವ್‌ಗಾಂಧಿ ಆರೋಗ್ಯ ವಿವಿ ನಿರ್ಮಾಣಗೊಳ್ಳಬೇಕು, ವಿವಿ ಕ್ಯಾಂಪಸ್‌ನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು.
- ದಶಪಥ ರಸ್ತೆಯಿಂದ ಸ್ಥಳೀಯ ವರ್ತಕರು, ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲ ವಾಗಿದ್ದು, ಜನರ ಬದುಕು ಕಟ್ಟಿಕೊಡುವ ಕೆಲಸವಾಗಬೇಕು.
- ರಸಗೊಬ್ಬರ ದಾಸ್ತಾನು ಮಾಡಲು ಜಿಲ್ಲೆಗೆ ಪ್ರತ್ಯೇಕ ಗೋದಾಮು ನಿರ್ಮಾಣವಾಗಬೇಕು.
- ಮಾವು ಸಂಸ್ಕರಣಾ ಘಟಕ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕೂಡಲೇ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು.
- ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ, ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ, ಹಾರೋಹಳ್ಳಿ ಪಟ್ಟಣಗಳಿಗೆ ಯುಜಿಡಿ, ನಗರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಮೊದಲಾದ ಮೂಲಸೌಕರ್ಯ ಕಲ್ಪಿಸಬೇಕು.
- ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕು.