ಶಿರಸಿ: 17ನೇ ಶತಮಾನಕ್ಕೆ ಸಂಬಂಧಿ ಸಿದ ಮಣ್ಣಿನ ಕುಡಿಯುವ ನೀರಿನ ಮಡಿಕೆ, ಮಣ್ಣಿನ ಪಾತ್ರೆಗಳು ತಾಲೂಕಿನ ನೆಗ್ಗು ಗ್ರಾಪಂ ವ್ಯಾಪ್ತಿಯ ನೇರ್ಲವಳ್ಳಿ ಗ್ರಾಮದಲ್ಲಿ ಪತ್ತೆಯಾಗಿವೆ.
ಜೈನರ ಕಾಲದಲ್ಲಿ ಇದು ಬಳಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯ ದೇವಿಕೈ ಮಜರೆಯಲ್ಲಿ ಈ ಕುರುಹುಗಳು ಪತ್ತೆಯಾಗಿವೆ. ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಇಲಾಖೆ ಗಿಡಗಳನ್ನು ನೆಡುವ ಸಲುವಾಗಿ ಗುಂಡಿಗಳನ್ನು ನಿರ್ಮಿಸುತ್ತಿದೆ. ಸುಮಾರು ಎರಡು ಅಡಿ ಆಳದ ಗುಂಡಿಗಳನ್ನು ತೋಡುವಾಗ ಈ ಮಡಿಕೆಗಳು ಪತ್ತೆಯಾಗಿವೆ. ಸನಿಹದಲ್ಲಿಯೇ ಜೀರ್ಣಾವಸ್ಥೆಯಲ್ಲಿರುವ ಸಾವಿರಾರು ವರ್ಷಗಳ ಹಿಂದಿನ ಕಲ್ಲೇಶ್ವರ ದೇವಾಲಯವಿದ್ದು, ದೇವಾಲಯಕ್ಕೂ ಈ ಮಡಿಕೆಗಳಿಗೂ ಸಂಬಂಧವಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
ಮಹಿಳೆಯ ಚಿತ್ರ ಇರುವ ಮಡಿಕೆಗಳು, ಕಿರೀಟ ಹೊತ್ತ ಮಡಿಕೆಗಳು ಇಲ್ಲಿ ಪತ್ತೆಯಾಗಿವೆ. ಮೂರು ಮಡಿಕೆಗಳು ಪತ್ತೆಯಾಗಿದ್ದು, ಒಡೆದ ಸ್ಥಿತಿಯಲ್ಲಿವೆ. ಈ ಜಾಗದಲ್ಲಿ ಉತVನನ ನಡೆಸಿದರೆ ಇನ್ನಷ್ಟು ಪುರಾತನ ಮಡಿಕೆಗಳು ಸಿಗಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಇಲ್ಲಿಯ ಮಣ್ಣಿನ ಮಡಿಕೆಗಳನ್ನು ಪರಿಶೀಲಿಸಿರುವ ಇತಿಹಾಸ ತಜ್ಞ ಲಕ್ಷ್ಮೀಶ ಸೋಂದಾ, 17ನೇ ಶತಮಾನಕ್ಕೆ ಇವು ಸೇರಿದ್ದಾಗಿರಬಹುದು. ಜೈನ ಸಮುದಾಯದಲ್ಲಿ ಬಂಡಿ ಹಬ್ಬ ಆಚರಣೆ ನಡೆಯುತ್ತದೆ. ಆ ಹಬ್ಬದಲ್ಲಿ ಈ ರೀತಿಯ ಆಕೃತಿಗಳನ್ನು ರಚಿಸಿ ರಾತ್ರಿ ವೇಳೆ ಬೆಂಕಿ ಹಾಕಿಕೊಂಡು ನರ್ತಿಸುತ್ತ ಅವುಗಳನ್ನು ಹೊರ ಪ್ರದೇಶದಲ್ಲಿ ಇಡುವ ಸಂಪ್ರದಾಯ ಸ್ಥಳೀಯವಾಗಿ ನಡೆಯುತ್ತಿತ್ತು ಎಂದಿದ್ದಾರೆ. ಇತಿಹಾಸ ತಜ್ಞ ಡಾ| ಅ. ಸುಂದರ ಅವರೂ ಸಹ ಜೈನರ ಈ ಸಂಪ್ರದಾಯದ ಬಗ್ಗೆ ಇಟಲಿಯ ಸೆಮಿನಾರ್‌ನಲ್ಲಿ ಸಹ ಪ್ರಬಂಧ ಮಂಡನೆ ನಡೆಸಿದ್ದರು.
ಇದನ್ನೂ ಓದಿ:ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭ
ಅವರು ಪ್ರತಿಪಾದಿಸಿದ್ದ ಸಂಗತಿಗಳಿಗೆ ಈ ಅವಶೇಷಗಳ ಹೋಲಿಕೆ ಕಂಡುಬರುತ್ತಿದೆ. ಕೆಲ ಕಲಾಕೃತಿಗಳು ಇತಿಹಾಸ ಪೂರ್ವ ಯುಗದ್ದಾಗಿಯೂ ಕಂಡುಬರುತ್ತಿದೆ. ಈ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕಾಗಿದೆ. ಇಲ್ಲಿ ದೊರೆತ ಕುರುಹುಗಳನ್ನು ಜೋಪಾನ ಮಾಡಬೇಕಾದ ಅಗತ್ಯತೆ ಇದೆ ಎಂದಿದ್ದಾರೆ. ಜಾನ್ಮನೆ ವಲಯಾರಣ್ಯಾಧಿಕಾರಿ ಪವಿತ್ರ ಸಿ.ಜೆ., ಈ ಕುರುಹುಗಳನ್ನು ಸಂಗ್ರಹಿಸಿ ಸುರಕ್ಷಿತವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.