ಮುಂಬಯಿ: ಪರಿಸರ ಮಾಲಿನ್ಯ ಮಾಡುವ ಯಾವುದೇ ಉದ್ದಿಮೆಗಳನ್ನು ನಾವು ಖಂಡಿತವಾಗಿಯೂ ಬೆಂಬಲಿ ಸುವುದಿಲ್ಲ. ಅದನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಬಿಡುವುದಿಲ್ಲ. ಕಳೆದ 17 ವರ್ಷಗಳಿಂದ ಸಮಿತಿಯು ನಮ್ಮೂರಿನ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಾ ಬಂದಿದೆ. ಸಂಸ್ಥಾಪಕ ಜಯಶ್ರೀಕೃಷ್ಣ ಶೆಟ್ಟಿ ಅವರು ಹಾಗೂ ಇತರ ಅಧ್ಯಕ್ಷರುಗಳ ನೇತೃತ್ವದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂಬ ಸಂತೃಪ್ತಿ ನಮಗಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ನುಡಿದರು.
ಅ.5 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನ ಸಂಕುಲದ ಅನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸು ತ್ತಿರುವ ಏಕೈಕ ಸರಕಾರೇತರ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಇದರ 17 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿಯ ನೂತನ ಅಧ್ಯಕ್ಷರಾಗಿ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಪುನ:ರಾಯ್ಕೆಗೊಂಡಿರುವುದು ನಮಗೆ ಸಂತೋಷದ ಸಂಗತಿಯಾಗಿದೆ. ಅವರ ಅಧಿಕಾರಾವಧಿಯಲ್ಲಿ ಈ ಸಮಿತಿಯಿಂದ ಇನ್ನಷ್ಟು ಕೆಲಸ-ಕಾರ್ಯಗಳು ನಡೆದು ತುಳುನಾಡಿನ ಅಭಿವೃದ್ದಿಯಾಗಲಿ ಎಂದು ನುಡಿದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 2018-2021 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಮರು ನೇಮಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯಡ್ಕ ಮೋಹನ್‌ದಾಸ್ ಹಾಗೂ ಗೌರವ ಕೋಶಾಧಿಕಾರಿಯಾಗಿ ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಅವರು ಆಯ್ಕೆಯಾದರು. ಅಲ್ಲದೆ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಗೆ 25 ಮಂದಿಯನ್ನು ನೇಮಿಸಲಾಯಿತು.
ನೂತನ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳನ್ನು ಧರ್ಮಪಾಲ ಯು. ದೇವಾಡಿಗ ಅವರು ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿ ಶುಭಹಾರೈಸಿದರು. ಪದಾಧಿಕಾರಿಗಳು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್. ಬೆಳ್ಚಡ ಅವರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ತುಳಸೀದಾಸ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.
ಸಮಿತಿಯ ಲೆಕ್ಕಪರಿಶೋಧಕರಾಗಿ ಸಿಎ ಪ್ರಕಾಶ್ ಶೆಟ್ಟಿ, ಟಿ. ಸಿ. ಶೆಟ್ಟಿ ಆ್ಯಂಡ್ ಕಂಪೆನಿಯನ್ನು ನೇಮಿಸಲಾಯಿತು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯ ಕ್ಷರುಗಳಾದ ಜಗನ್ನಾಥ ಗಾಣಿಗ, ಪಿ. ಡಿ. ಶೆಟ್ಟಿ, ಮೋಹಿದ್ದೀನ್ ಮುಂಡ್ಕೂ ರು, ಸಿಎ ಐ. ಆರ್. ಶೆಟ್ಟಿ, ಸಂಸ್ಥಾಪಕ, ನೂತನ ಅಧ್ಯಕ್ಷ ಜಯಕೃಷ್ಣ ಎ. ಶೆಟ್ಟಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಿತಿಯ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜಾ, ಕಾರ್ಯದರ್ಶಿ ಸುರೇಂದ್ರ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು. ಮಹಾಸಭೆಯ ಆನಂತರ ಬಹಿರಂಗ ಅಧಿವೇಶನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.
ಮಹಾಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು, ಪದಾಧಿ ಕಾರಿಗಳು ನಗರದ ಉಧ್ಯಮಿಗಳು ವಿವಿಧ ಸಂಘಟನೆಯ ಪದಾಧಿ ಕಾರಿಗಳು ಸಮಿತಿಯ ಹಿತೈಸಿಗಳು ಹಾಗೂ ಸಮಿತಿಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ