Advertisement
ಹಳೆಯಂಗಡಿ: ಕರಾವಳಿಯಲ್ಲಿ ಶೈಕ್ಷಣಿಕ ಕ್ರಾಂತಿಗೈದ ಯುನೈಟೆಡ್ ಬಾಸೆಲ್ ಮಿಷನ್ ಸಂಸ್ಥೆಯಿಂದ 1840ರ ಮಾರ್ಚ್ 1ರಂದು ಆರಂಭಗೊಂಡ ಹಳೆಯಂಗಡಿಯ ಸರಕಾರಿ ಅನುದಾನಿತ ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಬರೋಬ್ಬರಿ 179 ವರ್ಷ.ಆರಂಭದಲ್ಲಿ ಮುಳಿಹುಲ್ಲಿನ ಮೇಲ್ಛಾವಣಿ ಹೊಂದಿದ್ದ ಈ ಶಾಲೆಯನ್ನು 1ರಿಂದ 5ನೇ ತರಗತಿಯವರೆಗೆ ನಡೆಸಲು ಅನುಮತಿ ಪಡೆದು ಅನಂತರ 1987ರಲ್ಲಿ 7ನೇ ತರಗತಿ ಯವರೆಗೆ ವಿಸ್ತರಿಸಲಾಯಿತು. 1965ರ ವರೆಗೆ ಈ ಶಾಲೆ ಚರ್ಚ್ ಸಹಿತ ಶಾಲೆಯಾಗಿತ್ತು. ರವಿವಾರ ಚರ್ಚ್‌ನ ಪ್ರಾರ್ಥನೆಗೆ ಮೀಸಲಾದರೆ ಉಳಿದ 6 ದಿನಗಳಲ್ಲಿ ವಿದ್ಯಾರ್ಜನೆ ನಡೆಯುತ್ತಿತ್ತು. 1965ರಲ್ಲಿ ಚರ್ಚ್ ನಿರ್ಮಾಣವಾದ ಅನಂತರ ಶಾಲೆಯು ಸಂಪೂರ್ಣ ಶಿಕ್ಷಣಕ್ಕೆ ಮೀಸಲಾಯಿತು.
ಶಾಲೆಯು ಅಲ್ಪಸಂಖ್ಯಾಕ ಕೋಟಾದಲ್ಲಿ ಮಂಜೂರಾಗಿದ್ದರೂ ಸಹ ಇಲ್ಲಿನ ಸುತ್ತಮುತ್ತ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿನ ಜಾತಿ-ಮತ-ಭೇದ ಇಲ್ಲದೇ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು ಇಂದು ಈ ವ್ಯಾಪ್ತಿಯಲ್ಲಿ 5 ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಆರಂಭದಲ್ಲಿ ಚರ್ಚ್‌ನ ಸಭಾ ಪಾಲಕರೇ ಇಲ್ಲಿನ ಮುಖ್ಯ ಗುರುವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಮುಖ್ಯ ಶಿಕ್ಷಕರಿಗೆ “ಅಯ್ಯ’ ಎಂಬ ನಾಮಧೇಯ ಪ್ರಚಲಿತದಲ್ಲಿದೆ. ಮುಂದೆ ಅನುದಾನಿತ ಶಾಲೆಯ ಶಿಕ್ಷಕರೇ ಭಡ್ತಿಹೊಂದಿ ಮುಖ್ಯ ಶಿಕ್ಷಕರಾದರು. ಆರಂಭದಲ್ಲಿನ ಶಿಕ್ಷಕರ ಬಗ್ಗೆ ಸ್ಪಷ್ಟವಾದ ದಾಖಲೆ ಇಲ್ಲದಿದ್ದರೂ ಸ್ಥಳೀಯವಾಗಿ ಪಠೇಲ್ ಪರಂಪರೆಯ ಕಾಮೆರೊಟ್ಟು ಮನೆತನದ ಗರಿಷ್ಠ ಪ್ರಮಾಣದ ವ್ಯಕ್ತಿಗಳು ಇಲ್ಲಿ ಶಿಕ್ಷಕರಾಗಿದ್ದರು. ಅವರಲ್ಲಿ ಪಿ.ಬಿ. ಫಕೀರಪ್ಪ, ಕೊರಗಪ್ಪ ಪಠೇಲ್, ಮೀರಾ ಬಾಯಿ, ಮೋಹಿನಿ ಸಹೋದರಿಯರು, ಸಭಾಪಾಲಕರಾಗಿದ್ದ ರೆ.ಜಿ.ಎ.ಬೆರ್ನಾಡ್ ಅವರ ಪತ್ನಿ ದೇವದಾನ ಜಯಾಮಣಿ, ಸದಾನಂದ ಪಾಲನ್ ಮತ್ತು ಕಬಿತಾ ಪಾಲನ್, ಜಯವೀರ ಕರ್ಕಡ ಮತ್ತು ರಮಣಿ ಕರ್ಕಡ, ದಂಪತಿಗಳ ಸಹಿತ ತಂದೆ, ಪುತ್ರಿ, ಸೊಸೆಯಂದಿರು ಹೀಗೆ ವಿದ್ಯಾರ್ಥಿಗಳಾದವರೇ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ನಿಯುಕ್ತಿಗೊಂಡಿದ್ದಾರೆ.
ಶಾಲೆಯ ಆರಂಭದಲ್ಲಿ 200 ವಿದ್ಯಾರ್ಥಿಗಳಿದ್ದರು. ಇಂದು ಶಾಲೆಯಲ್ಲಿ ಒಟ್ಟು 25 ಮಂದಿ ವಿದ್ಯಾರ್ಥಿಗಳಿದ್ದಾರೆ. ಮೂಲ್ಕಿ ರೋಟರಿಯಿಂದ 2 ಲಕ್ಷ ರೂ. ವೆಚ್ಚದ ಅಂತಾರಾಷ್ಟ್ರೀಯ ನಿ ಧಿಯಿಂದ ಕಂಪ್ಯೂಟರ್ ಅಳವಡಿಸಲಾಗಿದೆ. ಹಳೆ ವಿದ್ಯಾರ್ಥಿ ರತ್ನಾ ಕಿರೋಡಿಯನ್ ಅವರು ತಮ್ಮ ಪುತ್ರ ದಿನೇಶ್ ಮೂಲಕ 4 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡದ ಸಂಪೂರ್ಣ ದುರಸ್ತಿ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಯಾಗಿದ್ದ ಅನಿವಾಸಿ ಭಾರತೀಯ ಆಸ್ಟಿನ್ ಸಂತೋಷ್ ಅವರು ಇಂದಿಗೂ ಗೌರವ ಶಿಕ್ಷಕಿಯರ ವೇತನಕ್ಕೆ ಆಸರೆಯಾಗಿದ್ದಾರೆ.
Related Articles
Advertisement
ಶಿಕ್ಷಕರ ನಿಸ್ವಾರ್ಥ ಸೇವೆಸದಾನಂದ ಪಾಲನ್ನ, ಕಡಕ್ ಮಾಸ್ಟರ್ ಆಗಿದ್ದ ಕೋಟಿ ಮಾಸ್ಟರ್‌ರ ನೆನಪುಗಳು ಹಚ್ಚ ಹಸುರಾಗಿವೆ. ರೇವತಿ ಟೀಚರ್ ಅವರ ಸೇವೆ ವಿಶೇಷವಾಗಿದ್ದು, ಕನ್ನಡ ಶಾಲೆಗೆ ಕೊರತೆ ಕಂಡಾಗ ಸ್ವತಃ ತಾವೇ ಹಣ ವ್ಯಯಿಸಿ ವಾಹನದ ಮೂಲಕ ಮಕ್ಕಳನ್ನು ಕರೆ ತರುತ್ತಿದ್ದರು. ಗೌರವ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ತಮ್ಮ ಸಂಬಳದಲ್ಲಿ ಅರ್ಧಾಂಶ ನೀಡುತ್ತಿದ್ದ ಇವರ ಸೇವೆಗೆ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಸಂದಿದೆ. ಆ ಸಮಯದಲ್ಲಿ 18 ಮಂದಿ ಶಿಕ್ಷಕರಿದ್ದ ಶಾಲೆಯಲ್ಲಿ ಇಂದು ಪ್ರಭಾರ ಓರ್ವ ಮುಖ್ಯ ಶಿಕ್ಷಕರೊಂದಿಗೆ 4 ಮಂದಿ ಗೌರವ ಶಿಕ್ಷಕಿಯರಿದ್ದಾರೆ. ಶಿಕ್ಷಕರು ಹಿಂದಿನ ಕಾಲದ ಕಥೆಗಳನ್ನು ಹೇಳಿ ಅದರ ಮೂಲಕ ಕನ್ನಡ ಪಾಠ ನಡೆಸುತ್ತಿದ್ದರು. ಇದು ನಮ್ಮ ಸ್ಮತಿ ಪಟಲದಲ್ಲಿ ಅಚ್ಚೊತ್ತಿತ್ತು. ಶಾಲೆಯಲ್ಲಿ ಶಿಸ್ತಿಗೆ ಪ್ರಾಮುಖ್ಯ ನೀಡಿದ್ದರು. ತಪ್ಪಿಗೆ ಶಿಕ್ಷೆಯೂ ಇತ್ತು. ಅಂದು ನಡೆಸಿದ ಚೇಷ್ಟೆಗೆ ಅನುಭವಿಸಿದ ಶಿಕ್ಷೆ ಇಂದಿಗೂ ನೆನಪಿನಲ್ಲಿದ್ದರಿಂದಲೇ ನಮ್ಮ ಜೀವನದಲ್ಲಿನ ಏರಿಳಿತದ ಸ್ಥಾನಮಾನಕ್ಕೆ ಪರೋಕ್ಷ ಕಾರಣ.
-ಡಾ| ಶಿವಾನಂದ ಪ್ರಭು
ಹಿರಿಯ ಸರ್ಜನ್, ಕೆಎಂಸಿ ಮಂಗಳೂರು 179 ವರ್ಷಗಳ ಇತಿಹಾಸ ಇರುವ ಈ ಶಾಲೆ ಉಳಿಯಬೇಕು ಎಂಬ ಹಂಬಲ ನಮ್ಮದು. ವಿದ್ಯಾರ್ಥಿಗಳ ಸಂಖ್ಯೆ ಮುಖ್ಯವಲ್ಲ ಶಾಲೆಯ ಗತವೈಭವ ಮರು ಕಾಣಬೇಕು. ಶಾಲೆಯ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ. ಹಳೆಯಂಗಡಿ ಸುತ್ತ ಇರುವ ಒಂದೇ ಕನ್ನಡ ಶಾಲೆ ಇದಾಗಿದೆ.
-ಮಲ್ಲಿಕಾರ್ಜುನ ಕಾಂಬ್ಳೆ,
ಪ್ರಭಾರ ಮುಖ್ಯ ಶಿಕ್ಷಕರು – ನರೇಂದ್ರ ಕೆರೆಕಾಡು