ಯಾದಗಿರಿ: ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಯಾದ ರೈತರು, ಅರ್ಹ ಮನೆ ಮಾಲೀಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನ್ಯಾಯಯುತ ಜಂಟಿ ಸಮೀಕ್ಷೆ ವರದಿಯನ್ನು ತ್ವರಿತವಾಗಿ ದಾಖಲಿಸಲು ಜಿಲ್ಲಾಧಿಕಾರಿ ಡಾ|ರಾಗಪ್ರಿಯಾ ಸೂಚಿಸಿದರು.
ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅತಿವೃಷ್ಟಿ ಮತ್ತು ಪ್ರವಾಹಕ್ಕೆ ಸಂಬಂಧಿ ಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಂಟಿ ಸಮೀಕ್ಷೆ ಮಾಡಿದ ವರದಿಗಳನ್ನು ಶೀಘ್ರವಾಗಿ ಇನ್ನೊಮ್ಮೆ ಯಾವುದೇ ತಪ್ಪು ಇಲ್ಲದಂತೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಒಟ್ಟು 1801 ಮನೆಹಾನಿ ವಿವರವನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದ್ದು, ಯಾದಗಿರಿ ತಾಲೂಕಿನ 56, ಶಹಾಪುರ 278, ಸುರಪುರ 526,ವಡಗೇರಾ 201 ಹಾಗೂ ಹುಣಸಗಿಯ 672 ಮನೆಹಾನಿಯನ್ನು ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ತಹಶೀಲ್ದಾರರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಭೀಮಾ ನದಿಯ ಪ್ರವಾಹದಿಂದ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ವರದಿ ಪ್ರಕಾರ ಒಟ್ಟು ಬೆಳೆಹಾನಿ 17830.80 ಹೆಕ್ಟೇರ್‌ಗಳಷ್ಟು ಬೆಳೆಹಾನಿಯಾಗಿದ್ದು, ಶಹಾಪುರ ತಾಲೂಕಿನಲ್ಲಿ 6232.60 ಹೆಕ್ಟೇರ್ ಹಾನಿಯಾಗಿದ್ದು, ವಡಗೇರಾ 7864.00 ಹೆ, ಯಾದಗಿರಿ 3734.20 ಹೆಕ್ಟೇರ್‌ನಷ್ಟು ಹಾನಿಯಾಗಿದ್ದು, ಸಮೀಕ್ಷೆ ವರದಿಗಳನ್ನು ಮತ್ತೂಮ್ಮೆ ಪರಿಶೀಲಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಕ್ಟೋಬರ್ ಸುರಿದ ಮಳೆಯಿಂದಾಗಿ ಕೃಷಿ ಇಲಾಖೆಯ ಜಂಟಿ ಸಮೀಕ್ಷೆ ವರದಿ ಪ್ರಕಾರ ಒಟ್ಟು ಬೆಳೆಹಾನಿ 13287.05 ಹೆಕ್ಟೇರ್‌ಗಳಷ್ಟು ಬೆಳೆಹಾನಿಯಾಗಿದ್ದು, ಇದರಲ್ಲಿ ಶಹಾಪುರತಾಲೂಕಿನಲ್ಲಿ 1517 ಹೆ, ವಡಗೇರಾ 1741ಹೆ, ಸುರಪುರ 716.28 ಹೆ, ಹುಣಸಗಿ 653.93ಹೆ, ಯಾದಗಿರಿ 3705.38 ಹೆ. ಸೇರಿದಂತೆ ಗುರುಮಠಕಲ್ ವ್ಯಾಪ್ತಿಯಲ್ಲಿ 4953.46 ಹೆಕ್ಟೇರ್ ನಷ್ಟು ಬೆಳೆಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ, ಆಹಾರ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಪಂ ಪ್ರಭಾರಿ ಯೋಜನಾ ನಿರ್ದೇಶಕರಾದ ಗುರುನಾಥ ಗೌಡಪ್ಪನವರ,ಎಲ್ಲಾ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರರು, ವಿಪತ್ತು ನಿರ್ವಹಣಾ ಇಲಾಖೆ ಸಿಬ್ಬಂದಿ ಸೇರಿದಂತೆ ಸಂಬಂಧಿ ಸಿದ ಅಧಿಕಾರಿಗಳು ಇದ್ದರು.