Advertisement

ದುಬಾೖಯಿಂದ 177 ಮಂದಿ ಇಂದು ಆಗಮನ

09:40 AM May 13, 2020 | Sriram |

ಮಂಗಳೂರು: ಕೋವಿಡ್-19 ಕಾರಣದಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಏರ್‌ಲಿಫ್ಟ್‌ ಮಾಡುವ “ವಂದೇ ಮಾತರಂ’ ಕಾರ್ಯಾಚರಣೆಯಂತೆ ದುಬಾೖಯಿಂದ ಮಂಗಳೂರಿಗೆ 177 ಕನ್ನಡಿಗರಿರುವ ವಿಮಾನ ಮೇ 12ರಂದು ರಾತ್ರಿ 10 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ.

Advertisement

ದುಬಾೖಯಲ್ಲಿರುವ ಭಾರತೀಯರನ್ನು ಕರೆ ತರಲು ಮಂಗಳೂರು ಏರ್‌ಪೋರ್ಟ್‌ನಿಂದ ಮಂಗಳವಾರ ಮಧ್ಯಾಹ್ನ ಪ್ರಯಾಣಿಕರಿಲ್ಲದ ಏರ್‌ ಇಂಡಿಯಾ ವಿಮಾನ ದುಬಾೖಗೆ ತೆರಳಲಿದೆ. ರಾತ್ರಿ 10ರ ಸುಮಾರಿಗೆ ಈ ವಿಮಾನವು ದುಬಾೖಯಿಂದ ಮಂಗಳೂರಿಗೆ ಆಗಮಿಸಲಿದೆ.

ಮಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ಸೂಕ್ತ ಆರೋಗ್ಯ ತಪಾಸಣೆ ನಡೆಸಿ, ಜಿಲ್ಲಾಡಳಿತ ನಿಗದಿಪಡಿಸಿದ ಕ್ವಾರಂಟೈನ್‌ಗೆ ಕಳುಹಿಸುವ ಸಂಬಂಧ ತಯಾರಿ ನಡೆಸಿದೆ. ಪ್ರಯಾಣಿಕರು ವಿಮಾನದಿಂದ ಇಳಿದ ಅನಂತರ ಅವರ ಆರೋಗ್ಯ ಪರಿಶೀಲನೆ, ಪಾಸ್‌ಗಳ ವಿತರಣೆ, ಕ್ವಾರಂಟೈನ್‌ಗೆ ಹೊಟೇಲ್‌ ಆಯ್ಕೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ಪರಿಶೀಲನೆಗೆ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ಜಿಲ್ಲಾಡಳಿತ ನೇಮಿಸಿದೆ.

ಅಲ್ಲಿಂದ ಬರುವ 177 ಪ್ರಯಾಣಿಕರ ಪೈಕಿ ಮಹಿಳೆಯರು, ಪುರುಷರ ಸಂಖ್ಯೆ ಎಷ್ಟು ಹಾಗೂ ಯಾವ ಜಿಲ್ಲೆಯವರು ಎಷ್ಟು ಮಂದಿ ಎಂಬ ಬಗ್ಗೆ ದ.ಕ. ಜಿಲ್ಲಾಡಳಿತಕ್ಕೆ ಸೋಮವಾರ ಸಂಜೆಯ ವರೆಗೂ ಅಂತಿಮ ಮಾಹಿತಿ ಲಭಿಸಿರಲಿಲ್ಲ.

ದುಬಾೖ ಏರ್‌ಪೋರ್ಟ್‌ ನಲ್ಲಿ ಪ್ರಯಾಣಿಕರು ಬೋರ್ಡಿಂಗ್‌ ಆದ ಬಳಿಕವಷ್ಟೇ ಈ ಕುರಿತ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸರ್ವ ತಯಾರಿ: ರಾಹುಲ್‌ ಶಿಂಧೆ
ದುಬಾೖಯಿಂದ ವಿಮಾನ ಮಂಗಳವಾರ ಆಗಮಿಸುವ ಹಿನ್ನೆಲೆಯಲ್ಲಿ ಸೂಕ್ತ ತಯಾರಿ ಹಾಗೂ ಕಾರ್ಯಯೋಜನೆ ಹಮ್ಮಿಕೊಳ್ಳುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ವಿಶೇಷ ಸಭೆಯು ದ.ಕ. ಉಸ್ತುವಾರಿ ನೋಡಿಕೊಂಡಿರುವ ಐಎಎಸ್‌ ಅಧಿಕಾರಿ ರಾಹುಲ್‌ ಶಿಂಧೆ ಅವರ ನೇತೃತ್ವದಲ್ಲಿ ನಡೆಯಿತು.

ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. 17 ಹೊಟೇಲ್‌ಗ‌ಳು ಹಾಗೂ 12 ಹಾಸ್ಟೆಲ್‌ಗ‌ಳಲ್ಲಿ ಅವರಿಗೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ವಿಭಾಗಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅವರು ಎಲ್ಲ ಕಡೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ರಾಹುಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಚಂದ್ರ ಬಾಯರಿ, ಮಂಗಳೂರು ಮಹಾನಗರಪಾಲಿಕೆಯ ಪರಿಸರ ಅಭಿಯಂತ ಮಧು ಮನೋಹರ್‌ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಹೊಟೇಲ್‌ ಬಾಡಿಗೆ 1,000 ರೂ.ಗಳಿಂದ 4,500 ರೂ.!
ವಿದೇಶದಿಂದ ಬಂದವರಿಗೆ ದ.ಕ. ಜಿಲ್ಲಾಡಳಿತದಿಂದ ಕ್ವಾರಂಟೈನ್‌ಗಾಗಿ ನಗರದ 17 ಹೊಟೇಲ್‌, 12 ಹಾಸ್ಟೆಲ್‌ಗ‌ಳನ್ನು ನಿಗದಿಗೊಳಿಸಲಾಗಿದೆ. ಕಡಿಮೆ ವೆಚ್ಚದಿಂದ ಆರಂಭವಾಗಿ ಮಧ್ಯಮ ಹಾಗೂ ಅಧಿಕ ವೆಚ್ಚದ ರೂಂಗಳನ್ನು ನಿಗದಿಪಡಿಸಲಾಗಿದೆ. ಕನಿಷ್ಠ 1,000ರೂ.ಗಳಿಂದ ಗರಿಷ್ಠ 4,500 ರೂ. ವರೆಗಿನ ಮೊತ್ತದ ರೂಂಗಳನ್ನು ನಿಗದಿಗೊಳಿಸಲಾಗಿದೆ. ಈ ಮಧ್ಯೆ ವಿದೇಶದಲ್ಲಿರುವವರ ಕ್ವಾರಂಟೈನ್‌ಗೆ ದುಬಾರಿ ವೆಚ್ಚದಲ್ಲಿ ದ.ಕ. ಜಿಲ್ಲೆಯಲ್ಲಿ ರೂಂಗಳನ್ನು ನಿಗದಿಪಡಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಪ್ರಯಾಣಿಕರಿಂದ ಆಕ್ಷೇಪವೂ ವ್ಯಕ್ತವಾಗಿದೆ. ದಿನಕ್ಕೆ ಕನಿಷ್ಠ ಸಾವಿರ ರೂ. ನೀಡುವುದಾದರೆ 14 ದಿನಕ್ಕೆ ಹಲವು ಸಾವಿರ ರೂ. ನೀಡಬೇಕಾಗಿರುವುದು ಇಂದಿನ ಕಾಲದಲ್ಲಿ ಬಹಳಷ್ಟು ಕಷ್ಟ ಎಂಬ ಅಭಿಪ್ರಾಯ ಅವರದ್ದು.

ಸಾರ್ವಜನಿಕರಿಗೆ ಪ್ರವೇಶವಿಲ್ಲ
ದುಬಾೖಯಿಂದ ಬರುವವರಿಗೆ ಎಲ್ಲ ವ್ಯವಸ್ಥೆಗಳನ್ನೂ ಜಿಲ್ಲಾಡಳಿತವೇ ಮಾಡಿರುವುದರಿಂದ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ಬರಲು ಅವಕಾಶ ಇಲ್ಲ. ಕ್ವಾರಂಟೈನ್‌ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

2 ಮಾದರಿ ಕ್ವಾರಂಟೈನ್‌
ವಿದೇಶದಿಂದ ಮಂಗಳೂರಿಗೆ ಬರುವ ಪ್ರಯಾಣಿಕರನ್ನು “ಎ’ ಮತ್ತು “ಬಿ’ ಎಂದು 2 ವಿಭಾಗ ಮಾಡಲಾಗುವುದು. ಕೆಮ್ಮು, ಜ್ವರ, ನೆಗಡಿ ಇರುವವರು “ಎ’ ವಿಭಾಗದವರಾಗಿದ್ದು, ಅವರಿಗೆ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್‌ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುವುದು. ಯಾವುದೇ ರೋಗ ಲಕ್ಷಣ ಇಲ್ಲದವರು “ಬಿ’ ವಿಭಾಗದವರಾಗಿದ್ದು, ಅಂಥವರನ್ನು ಜಿಲ್ಲಾಡಳಿತ ನಿಗದಿಪಡಿಸಿದ ಹೊಟೇಲ್‌/ಹಾಸ್ಟೆಲ್‌ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು.
– ರಾಹುಲ್‌ ಶಿಂಧೆ, ಐಎಎಸ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next