ಕೋಸ್ಟಲ್‌ವುಡ್‌ನಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಛಾಯಾಗ್ರಹಣ ಮಾಡಿದ ಸಿನೆಮಾ “ಎನ್ನ’ ಈ ವಾರ ಕರಾವಳಿಯಲ್ಲಿ ಸದ್ದು ಮಾಡಲಿದೆ. ಬರೋಬ್ಬರಿ 173 ಹೊಸ ಕಲಾವಿದರು ಸಿನೆಮಾದಲ್ಲಿ ಅಭಿನಯಿಸಿದ್ದು ಚಿತ್ರದ ವಿಶೇಷತೆ.
ಎನ್ನ ಸಿನೆಮಾಕ್ಕೆ ವೈಶಾಲಿ ಎಸ್. ಉಡುಪಿ ಛಾಯಾಗ್ರಹಣ ಮಾಡಿದ್ದಾರೆ. ತುಳು ಸಿನೆಮಾಗಳ ಪಾಲಿಗೆ ಇದೊಂದು ಹೊಸ ಅನುಭವ. ಕಿರುತೆರೆ ಹಾಗೂ ಸಿನೆಮಾ ಕ್ಷೇತ್ರದ ಬಗ್ಗೆ ಒಂದಷ್ಟು ಕಲಿತುಕೊಂಡಿರುವ ವೈಶಾಲಿ ಅವರು ಇದೀಗ ಪೂರ್ಣಪ್ರಮಾಣದ ಛಾಯಾಗ್ರಹಣದ ಮೂಲಕ ಎನ್ನ ಮೂಲಕ ಎಂಟ್ರಿ ಆಗುತ್ತಿದ್ದಾರೆ.
ಗ್ಲೋರಿಯಸ್ ಆಂಜೆಲೋರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಕೋಡಿಕಲ್ ವಿಶ್ವನಾಥ್ ನಿರ್ದೇಶನದಲ್ಲಿ ಸಿನೆಮಾ ತಯಾರಾಗಿದೆ. ಸಿನೆಮಾ ರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಎನ್ನ ಸಿನೆಮಾದಲ್ಲಿ ಬಹಳಷ್ಟು ಮಂದಿ ಹೊಸಬರಿಗೇ ಅವಕಾಶ ನೀಡಲಾಗಿದೆ. ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣ ಮಾಡಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ಮೂಲಕ ತುಳು ಸಿನೆಮಾರಂಗದಲ್ಲಿ ಹೊಸಬರ ಪ್ರವೇಶವಾಗಲಿ ಎಂಬ ಕನಸಿನೊಂದಿಗೆ ನಿರ್ದೇಶಕರು ಹೊಸಬರನ್ನು ಈ ಸಿನೆಮಾದಲ್ಲಿ ಅಧಿಕವಾಗಿ ಬಳಸಿಕೊಂಡಿದ್ದಾರೆ.
ಮುಖ್ಯ ಪಾತ್ರಗಳಲ್ಲಿ ವಿನೀತ್ ಕುಮಾರ್, ಶ್ರುತಿ ಪೂಜಾರಿ, ಅಶ್ಮಿತ್ ರಾಜ್, ಪ್ರತೀಕ್ ಸನಿಲ್, ಪ್ರಶಾಂತ್ ಸಿ.ಕೆ., ಧೀರಜ್ ನೀರುಮಾರ್ಗ, ಯತೀಶ್ ಪಾಲಡ್ಕ, ವಿನೋದ್ ಚಾರ್ಮಾಡಿ, ಗಾಡ್ವಿನ್ ಕ್ಯಾಸ್ಟಲಿನೋ, ಸಂದೀಪ್ ಶೆಟ್ಟಿ ರಾಯ್, ರಮೇಶ್ ರೈ ಕುಕ್ಕುವಳ್ಳಿ ಮುಂತಾದವರು ಬಣ್ಣಹಚ್ಚಿದ್ದಾರೆ. ಪೃಥ್ವಿ ಅಂಬರ್ ವಿಶೇಷ ಪಾತ್ರದಲ್ಲಿದ್ದಾರೆ.