Advertisement

Lok Sabha Election; ಅಕ್ರಮ ತಡೆಗೆ ಗಡಿ ಭಾಗದಲ್ಲಿ ಕಚ್ಚೆಚ್ಚರ

08:47 PM Mar 27, 2024 | Team Udayavani |

ಬೆಂಗಳೂರು: ಪಾರದರ್ಶಕ ಮತ್ತು ಅಕ್ರಮ ಮುಕ್ತ ಚುನಾವಣೆಗೆ ಪಣ ತೊಟ್ಟಿರುವ ಚುನಾವಣಾ ಆಯೋಗ ಚುನಾವಣಾ ಅಕ್ರಮಗಳನ್ನು ಮಟ್ಟ ಹಾಕಲು ರಾಜ್ಯದ ಗಡಿ ಜಿಲ್ಲೆಗಳಲ್ಲಿ ಪ್ರಬಲ ಜಾಲ ಹೆಣೆದಿದೆ.

Advertisement

ಮೊದಲ ಹಂತಕ್ಕೆ ಮಾ.28ರಂದು ಅಧಿಸೂಚನೆ ಹೊರಬೀಳುವ ಮೂಲಕ ಚುನಾವಣಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಗಲಿದೆ. ಅದಕ್ಕೆ ಪೂರಕವಾಗಿ ನೀತಿ ಸಂಹಿತೆ ಜಾರಿಯನ್ನು ಆಯೋಗ ಮತ್ತಷ್ಟು ಬಿಗಿಗೊಳಿಸಲಿದೆ. ಅದರಂತೆ ಚುನಾವಣಾ ಅಕ್ರಮಗಳ “ನುಸುಳುವಿಕೆ’ಯನ್ನು ತಡೆಯಲು ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿದೆ.
ನೆರೆಯ 6 ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ 24 ಜಿಲ್ಲೆಗಳು ಹಾಗೂ ಕರ್ನಾಟಕದ ಜತೆ ಗಡಿ ಹಂಚಿಕೊಂಡಿರುವ ನೆರೆ ರಾಜ್ಯಗಳ 29 ಜಿಲ್ಲೆಗಳ ಗಡಿ ಭಾಗದಲ್ಲಿ 172 ಪೊಲೀಸ್‌ ಚೆಕ್‌ಪೋಸ್ಟ್‌, 40 ಅಬಕಾರಿ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇದರ ಜತೆಗೆ 19 ಅರಣ್ಯ ಚೆಕ್‌ಪೋಸ್ಟ್‌ ಹಾಗೂ 15 ಸಾರಿಗೆ ಚೆಕ್‌ಪೋಸ್ಟ್‌ಗಳನ್ನು ರಾಜ್ಯದ ಗಡಿಗಳಲ್ಲಿ ಸ್ಥಾಪಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಗಳ ಕಾಲ ನಿಗಾ ಇಡಲಾಗಿದೆ.

ಕರ್ನಾಟಕಕ್ಕೆ ಹೊಂದಿಕೊಂಡ ಗಡಿ ರಾಜ್ಯದ ಜಿಲ್ಲೆ ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀತಿ ಸಂಹಿತೆ ಜಾರಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ ರಾಜ್ಯಕ್ಕೆ ಪ್ರವೇಶಿಸುವ ಗಡಿಗಳಲ್ಲಿ ಪೊಲೀಸ್‌ ನಾಕಾಗಳನ್ನು ಸ್ಥಾಪಿಸಲಾಗಿದ್ದು, ಮದ್ಯ ಹಾಗೂ ಹಣದ ಸಾಗಾಟ ತಡೆಗಟ್ಟಲು ಅಬಕಾರಿ ಮತ್ತು ಐಟಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ. ಇವರಿಗೆ ಪೊಲೀಸ್‌ ಅಧಿಕಾರಿಗಳು ಸಹ ಸಾಥ್‌ ನೀಡಲಿದ್ದಾರೆ. ಈ ಸಂಬಂಧ ಆಯಾ ರಾಜ¤ದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಪರಸ್ಪರ ಸಮನ್ವಯಕ್ಕಾಗಿ ಅಂತರರಾಜ್ಯ ಅಧಿಕಾರಿಗಳ ಸಮಿತಿಗಳನ್ನೂ ರಚಿಸಲಾಗಿದೆ ಎಂದು ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಗಡಿ ಭಾಗಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಳೆದೊಂದು ವರ್ಷದ ಆಗಮನ-ನಿರ್ಗಮನ ಪರಿಶೀಲಿಸಿ, ಅಕ್ರಮ ಹಣ, ಮದ್ಯ ಅಥವಾ ಇನ್ನಿತರೆ ವಾಣಿಜ್ಯ ಸರಕುಗಳು ಸಾಗಣೆ ಆಗಿದ್ದು, ಆ ಸಂಬಂಧ ಪ್ರಕರಣಗಳು ದಾಖಲಾಗಿದ್ದರೆ ಅದನ್ನು ಆಧರಿಸಿ ಅಂತಹ ಚೆಕ್‌ಪೋಸ್ಟ್‌ಗಳ ಮೇಲೆ ವಿಶೇಷ ನಿಗಾ ಇಡಲಾಗುತ್ತದೆ. ನಿಗದಿತ ಸಿಬ್ಬಂದಿಯ ಜೊತೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ವಿಶೇಷವಾಗಿ ವಾಣಿಜ್ಯ ಸರಕುಗಳು, ಗೃಹಬಳಕೆ ಸಾಮಗ್ರಿ, ಎಲೆಕ್ಟ್ರಾನಿಕ್‌ ವಸ್ತುಗಳು ರಾಜ್ಯಕ್ಕೆ ಹೆಚ್ಚಾಗಿ ಮುಂಬೈನಿಂದ ಬರುತ್ತದೆ. ಅದೇ ರೀತಿ ಮದ್ಯ ಆಂಧ್ರ ಮತ್ತು ಗೋವಾದಿಂದ ಹೆಚ್ಚಾಗಿ ಬರುತ್ತದೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಹೆಚ್ಚು ಬಿಗಿಗೊಳಿಸಲಾಗುತ್ತದೆ.

ಗಡಿ ಹಂಚಿಕೊಂಡಿರುವ ರಾಜ್ಯಗಳು:
ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಹಾಗೂ ಮಹಾರಾಷ್ಟ್ರ.
ರಾಜ್ಯದ ಗಡಿ ಜಿಲ್ಲೆಗಳು:
ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಚಾಮರಾಜನಗರ, ಕೊಡಗು ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ.

Advertisement

ನೆರೆ ರಾಜ್ಯದ ಗಡಿ ಜಿಲ್ಲೆಗಳು:
ಸಂಗರೆಡ್ಡಿ, ವಿಕಾರಾಬಾದ್‌, ನಾರಾಯಣಪೇಟ್‌, ಜೋಗುಳಾಂಬ, ಗದ್ವಾಲ್‌, ಕಾಮರೆಡ್ಡಿ, ಕರ್ನೂಲ್‌, ಅನಂತಪುರ, ಪಟ್ಟಪರ್ತಿ, ಅನ್ನಮಯ್ಯ, ಚಿತ್ತೂರು, ಕೃಷ್ಣಗಿರಿ, ಈರೋಡ್‌, ಸೇಲಂ, ನೀಲಗಿರಿ, ಕಾಸರಗೋಡು, ಕಣ್ಣೂರು, ವಯನಾಡ, ಸತ್ತಾರಿ, ದರ್ಬಂದೊರ, ಸಂಗ್ವೆಮ್‌, ಕ್ಯಾನ್‌ಕೋನ, ನಾಂದೇಡ, ಲಾಥೂರ್‌, ಉಸ್ಮಾನಾಬಾದ, ಸೋಲಾಪುರ, ಸಾಂಗ್ಲಿ, ಕೊಲ್ಲಾಪುರ, ಸಿಂಧುದುರ್ಗ.

ಬೇರೆ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ನಮ್ಮ ರಾಜ್ಯದ ಗಡಿ ಭಾಗಗಳಲ್ಲಿ ನಿಗಾ ಇಡಲಾಗಿದೆ. ಪೊಲೀಸ್‌, ಅಬಕಾರಿ ಖಾಯಂ ಚೆಕ್‌ಪೋಸ್ಟ್‌ಗಳು ಈಗಾಗಲೇ ಕಾರ್ಯರಂಭಿಸುತ್ತಿವೆ. ಉಚಿತ ಉಡುಗೊರೆಗಳು, ಮದ್ಯ, ಡ್ರಗ್ಸ್‌ ಮತ್ತಿತರ ಯಾವುದೇ ವಸ್ತುಗಳು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಪ್ರವೇಶಿಸಬಾರದು ಎಂಬ ನಿಟ್ಟಿನಲ್ಲಿ ನಾವು ಕಟ್ಟೆಚ್ಚರ ವಹಿಸಿದ್ದೇವೆ.
– ಮನೋಜ್‌ ಕುಮಾರ್‌ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next