ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿದ್ಯುತ್ ಅಪಘಾತದಿಂದ 1,712 ಜನ ಹಾಗೂ 1,849 ಜಾನುವಾರುಗಳು ಮೃತಪಟ್ಟಿವೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್‌ನ ಆರ್. ಧರ್ಮಸೇನ ಪ್ರಶ್ನೆಗೆ ನೀಡಿರುವ ಲಿಖೀತ ಉತ್ತರದಲ್ಲಿ ಸಚಿವರು, ಮೃತರಿಗೆ 5 ಲಕ್ಷ ರೂ. ಹಾಗೂ ಪ್ರತಿ ಜಾನುವಾರಿಗೆ 50 ಸಾವಿರ ರೂ. ಮೀರದಂತೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 2014-15ರಲ್ಲಿ 52 ಜನ ಹಾಗೂ 483 ಜಾನುವಾರು, 2015-16ರಲ್ಲಿ 441 ಜನ ಮತ್ತು 531 ಜಾನುವಾರು, 2016-17ರಲ್ಲಿ 425 ಜನ ಹಾಗೂ 448 ಜಾನುವಾರು, 2017-18ರಲ್ಲಿ ಅಕ್ಟೋಬರ್‌ವರೆಗೆ 317 ಜನ ಹಾಗೂ 387 ಜಾನುವಾರುಗಳು ಮೃತಪಟ್ಟಿವೆ ಎಂದು ವಿವರಿಸಿದರು.
ಪರಿಶಿಷ್ಟರ ಮೇಲೆ ಹಲ್ಲೆ ಪ್ರಕರಣ: ರಾಜ್ಯದಲ್ಲಿ 2016ರಲ್ಲಿ ಎಸ್ಸಿ, ಎಸ್ಟಿ ಪಂಗಡದವರ ಮೇಲಿನ ಹಲ್ಲೆ ಸಂಬಂಧ 1,985 ಪ್ರಕರಣಗಳು ದಾಖಲಾಗಿದ್ದು, ಅತಿಹೆಚ್ಚು 110 ಪ್ರಕರಣಗಳು ಬೆಂಗಳೂರು ಜಿಲ್ಲೆ ಹಾಗೂ 37 ಪ್ರಕರಣಗಳು ಆನೇಕಲ್ ತಾಲೂಕಿನಲ್ಲಿ ದಾಖಲಾಗಿವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕ ಪಿ. ರಾಜೀವ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಸಚಿವರು, ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ 56 ಪ್ರಕರಣಗಳು ಖುಲಾಸೆ ಯಾಗಿವೆ. ಒಬ್ಬರಿಗೆ ಶಿಕ್ಷೆಯಾಗಿದೆ ಎಂದು ವಿವರಿಸಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ದವರ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಈಗಾಗಲೇ ಬೆಳಗಾವಿ, ವಿಜಯಪುರ, ರಾಯಚೂರು, ಕೋಲಾರ, ಕಲಬುರಗಿ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾ ಗಿದೆ ಎಂದು ತಿಳಿಸಿದ್ದಾರೆ.
1.21 ಕೋಟಿ ಮದ್ಯದ ಪೆಟ್ಟಿಗೆ ಆಮದು: ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಹೊರದೇಶ ಹಾಗೂ ಹೊರ ರಾಜ್ಯಗಳಿಂದ 1.21 ಕೋಟಿ ಮದ್ಯದ ಪೆಟ್ಟಿಗೆಗಳನ್ನು ಆಮದು, 85.84 ಲಕ್ಷ ಮದ್ಯದ ಪೆಟ್ಟಿಗೆಗಳನ್ನು ರಫ್ತು ಮಾಡಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ. ಅಧಿವೇಶನದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ಪ್ರಶ್ನೆಗೆ ಉತ್ತರಿಸಿ, 2014-15 ರಿಂದ 2016-17ರ ಅವಧಿಯಲ್ಲಿ ಅಬಕಾರಿ ಇಲಾಖೆಯ ಅನುಮತಿ ಮೇರೆಗೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬ್ರಾಂದಿ, ಜಿನ್, ರಮ್,
ವೋಡಾ ಇತ್ಯಾದಿ ಮದ್ಯದ ಪೆಟ್ಟಿಗೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದೇ ರೀತಿ ಹೊರರಾಜ್ಯಗಳಿಗೂರಫ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೆಲ್ಫಿ ಗೀಳಿಗೆ 5 ಬಲಿ
ರಾಜ್ಯದಲ್ಲಿ 2017ರ ಜನವರಿಯಿಂದ ಅಕ್ಟೋಬರ್ 31ರವರೆಗೆ ಸೆಲ್ಫಿ ಗೀಳಿಗೆ 5 ಜನ ಅಸುನೀಗಿದ್ದಾರೆ. ರಾಜ್ಯದಲ್ಲಿನ ಅಪಾಯಕಾರಿ ಪ್ರವಾಸಿ ತಾಣಗಳು, ಜಲಪಾತಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಿ, ಜನರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಶಾಸಕ ಕೆ. ಗೋಪಾಲಯ್ಯರ ಪ್ರಶ್ನೆಗೆ ಗೃಹಸಚಿವ ರಾಮಲಿಂಗಾರೆಡ್ಡಿ ಲಿಖೀತ ಉತ್ತರ ನೀಡಿದ್ದಾರೆ.