ಕೊರಟಗೆರೆ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪಟ್ಟಣದ ಉದ್ಯಮಿ ಬಾಲಾಜಿ ದರ್ಶನ್ ನೇತೃತ್ವದಲ್ಲಿ ಆ.20 ರಂದು ಶನಿವಾರ ಪಟ್ಟಣದ ಪ್ರಧಾನ ರಸ್ತೆಯಲ್ಲಿ 1700 ಅಡಿ ಉದ್ದದ ರಾಷ್ಟ್ರಧ್ವಜ ಹಿಡಯುವ ಮೂಲಕ ಜಾಥ ನಡೆಸಲಾಯಿತು.
ಕೊರಟಗೆರೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಕನ್ನಡ ವೃತ್ತದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಪೂಜೆ ಸಲ್ಲಿಸುವ ಮೂಲಕ 1700 ಅಡಿ ಉದ್ದದ ರಾಷ್ಟ್ರಧ್ವಜವನ್ನು 1000 ಕ್ಕೂ ಹೆಚ್ಚು ವಿವಿಧ ಶಾಲಾ ವಿದ್ಯಾರ್ಥಿಗಳು ಹಿಡಿದು ಪ್ರಧಾನ ರಸ್ತೆಯ ಮೂಲಕ ಬಾವುಟವನ್ನು ಪ್ರದರ್ಶಿಸುತ್ತಾ ಭಾರತ ಮಾತೆಗೆ ಜೈಕಾರ ಹಾಕುವ ಮೂಲಕ ತಿರಂಗದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಸರ್ಕಾರಿ ಕಿರಿಯ ಕಾಲೇಜು ಕ್ರೀಡಾಂಗಣ ತಲುಪಿದರು.
ಬಾಲಾಜಿ ದರ್ಶನ್ ಮಾತನಾಡಿ ಭಾರತ ಎನ್ನುವುದು ಕೇವಲ ಹೆಸರಲ್ಲ ಆ ಹೆಸರಿನಲ್ಲಿಯೇ ಒಂದು ಶಕ್ತಿ ಇದೇ ಭಾರತವು ವಿಜಯನಗರ ಕಾಲದಿಂದಲೂ ಅತ್ಯಂತ ಶ್ರೀಮಂತ ರಾಷ್ಟವಾಗಿ ಸಾಂಸ್ಕೃತಿಕ, ಶಿಲ್ಪಕಲೆಗೆ ಹೆಸರುವಾಸಿಯಾದ ರಾಷ್ಟ್ರ, ಹಾಗೆಯೇ ಇಂದು ಸಹ ಭಾರತವು ತನ್ನ ಅಭಿವೃದ್ದಿಯಿಂದ ಹೆಸರುವಾಸಿಯಾಗುತ್ತಿರುವಂತಹ ರಾಷ್ಟ ಅನೇಕ ರಾಷ್ಟ ಭಕ್ತರನ್ನು ನಾವು ಪ್ರಸ್ತುತ ನೋಡುತ್ತಿರುವುದು ಹೆಮ್ಮಯ ವಿಷಯವಾಗಿದೆ ಎಂದರು.
ಕೊರಟಗೆರೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಂದ ೧೭೦೦ ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಪಟ್ಟಣದ ಕಾಳಿದಾಸ ಪ್ರೌಢಶಾಲಾ, ರವೀಂದ್ರಭಾರತಿ ವಿದ್ಯಾಸಂಸ್ಥೆ, ಬಾಲಕೀಯರ ಸರ್ಕಾರಿ ಪೌಢಶಾಲೆ, ಕನ್ನಿಕಾ ವಿದ್ಯಾಪೀಠ ಶಾಲೆ ಹಾಗೂ ಪ್ರಿಯದರ್ಶಿನಿ ಕಾಲೇಜಿನ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಪಟ್ಟಣದ ವಾಸವಿ ಯುವ ಜನ ಸಂಘದ ಎಲ್ಲಾ ಸದಸ್ಯರು ಧ್ವಜವನ್ನು ಹಿಡಿದು ಪ್ರಧಾನ ರಸ್ತೆಯಲ್ಲಿ ನಡೆಯುವ ಮೂಲಕ ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಆಯೋಜಕರಾದ ಉದ್ಯಮಿ ಬಾಲಾಜಿದರ್ಶನ್, ಶಿಲ್ಪಾದರ್ಶನ್, ನಾಗರಾಜಶ್ರೇಷ್ಠಿ, ಲಕ್ಷ್ಮೀ ನಾರಾಯಣ್, ಪಾವಗಡ ಗಿರೀಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಬದ್ರಿನಾಥ್, ಪದ್ಮರಮೇಶ್, ಸಾಗರ್, ಅರವಿಂದ, ಶಿವು, ಶ್ರೀಧರ್, ಮುಖ್ಯಶಿಕ್ಷಕ ಜಯಣ್ಣ, ಪ್ರಭಾಕರ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.