Advertisement

170 ರನ್‌ ನಮ್ಮ ಯೋಜನೆಯಾಗಿತ್ತು: ಹಾರ್ದಿಕ್‌ ಪಾಂಡ್ಯ

05:39 PM May 04, 2022 | Team Udayavani |

ಮುಂಬಯಿ: ನಿರೀಕ್ಷೆಗೂ ಮೀರಿದ ಸಾಧನೆಯೊಂದಿಗೆ ಈಗಾಗಲೇ ಪ್ಲೇ ಆಫ್ ಪ್ರವೇಶವನ್ನು ಖಾತ್ರಿಪಡಿಸಿದ ತಂಡವೆಂದರೆ ಗುಜರಾತ್‌ ಟೈಟಾನ್ಸ್‌. ಮಂಗಳವಾರ ರಾತ್ರಿ ಪಂಜಾಬ್‌ ವಿರುದ್ಧ ಜಯ ಸಾಧಿಸಿದ್ದೇ ಆದಲ್ಲಿ ಹಾರ್ದಿಕ್‌ ಪಾಂಡ್ಯ ಪಡೆಯ ಮುಂದಿನ ಸುತ್ತಿನ ಪಯಣ ಅಧಿಕೃತಗೊಳ್ಳುತ್ತಿತ್ತು. ಆದರೆ 8 ವಿಕೆಟ್‌ ಸೋಲಿನಿಂದಾಗಿ ಸಣ್ಣದೊಂದು ಹಿನ್ನಡೆಯಾಗಿದೆ.

Advertisement

ಇದು 10 ಪಂದ್ಯಗಳಲ್ಲಿ ಗುಜರಾತ್‌ಗೆ ಎದುರಾದ ಕೇವಲ 2ನೇ ಸೋಲು. ಗುಜರಾತ್‌ಗೆ ಮೊದಲ ಆಘಾತವಿಕ್ಕಿದ ತಂಡವೆಂದರೆ ಸನ್‌ರೈಸರ್ ಹೈದರಾಬಾದ್‌. ಕಾಕತಾಳೀಯವೆಂದರೆ, ಎ. 11ರ ಈ ಪಂದ್ಯವನ್ನೂ ಗುಜರಾತ್‌ 8 ವಿಕೆಟ್‌ಗಳಿಂದಲೇ ಸೋತಿತ್ತು!

ಪಂಜಾಬ್‌ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಗುಜರಾತ್‌ ಗಳಿಸಿದ್ದು 8 ವಿಕೆಟಿಗೆ 143 ರನ್‌ ಮಾತ್ರ. ಈ ಸಣ್ಣ ಮೊತ್ತದಿಂದಾಗಿ ಪಂದ್ಯವನ್ನು ಉಳಸಿಕೊಳ್ಳಲು ಗುಜರಾತ್‌ಗೆ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಮಾತಾಡಿದ ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಜನೆ ಸಾಕಾರಗೊಳ್ಳಲಿಲ್ಲ
“ನಮ್ಮ ನಿರೀಕ್ಷೆ ದೊಡ್ಡದಿತ್ತು. 170 ರನ್‌ ಯೋಜನೆ ಹಾಕಿಕೊಂಡಿದ್ದೆವು. ಹೀಗಾಗಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದೆ. ಆದರೆ ಈ ಯೋಜನೆ ಸಾಕಾರಗೊಳ್ಳಲಿಲ್ಲ. ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಸಾಗಿದ್ದರಿಂದ ನೂರೈವತ್ತರ ಮೊತ್ತ ಕೂಡ ಎಟುಕಲಿಲ್ಲ. ಮೊದಲು ಬ್ಯಾಟಿಂಗ್‌ ನಿರ್ಧಾರ ತಪ್ಪು ಎಂದು ನಾನು ಭಾವಿಸುವುದಿಲ್ಲ. ಈ ಸೀಸನ್‌ನಲ್ಲಿ ನಾವು ಚೇಸ್‌ ಮಾಡಿ ಜಯಿಸಿದ್ದೇ ಜಾಸ್ತಿ. ಈ ವರ್ತುಲದಿಂದ ನಾವು ಹೊರಬರಬೇಕಿತ್ತು. ಚೇಸಿಂಗ್‌ನಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿಯೇ ಇತ್ತು. ಇಂಥದೇ ಆಟವನ್ನು ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆಯೂ ಪ್ರದರ್ಶಿಸಬೇಕಿದೆ’ ಎಂದು ಹಾರ್ದಿಕ್‌ ಪಾಂಡ್ಯ ಹೇಳಿದರು.

“ಸುಲಭ ಹಾದಿ ಬಿಟ್ಟು ಕಠಿನ ಹಾದಿ ಹಿಡಿದಾಗ ಸವಾಲುಗಳು ಜಾಸ್ತಿ. ಪ್ರತೀ ಸಲ ಗೆದ್ದಾಗ ಇದಕ್ಕಿಂತಲೂ ಉತ್ತಮವಾಗಿ ಹೇಗೆ ಗೆಲ್ಲಬಹುದು ಎಂಬ ಕುರಿತು ಚರ್ಚೆ ನಡೆಸುತ್ತೇವೆ. ಹಾಗೆಯೇ ಈಗ ಸೋಲಿನ ಅವಲೋಕನ ಮಾಡಬೇಕಿದೆ. ಮುಂದಿನ ಪಂದ್ಯದಲ್ಲಿ ಕಮ್‌-ಬ್ಯಾಕ್‌ ಮಾಡಲಿದ್ದೇವೆ’ ಎಂದರು ಪಾಂಡ್ಯ.

Advertisement

ಬೌಲಿಂಗ್‌ ಉತ್ತಮ ಮಟ್ಟದಲ್ಲಿತ್ತು: ಅಗರ್ವಾಲ್‌
ಗೆಲುವಿನ ನಾಗಾಲೋಟದಲ್ಲಿದ್ದ ಗುಜರಾತ್‌ ಟೈಟಾನ್ಸ್‌ ತಂಡವನ್ನು ಹಿಡಿದು ನಿಲ್ಲಿಸಿದ ಹೆಗ್ಗಳಿಕೆ ಪಂಜಾಬ್‌ ಕಿಂಗ್ಸ್‌ಗೆ ಸಲ್ಲುತ್ತದೆ. ಒಂಭತ್ತರಲ್ಲಿ 4 ಪಂದ್ಯಗಳನ್ನಷ್ಟೇ ಜಯಿಸಿದ್ದ ಪಂಜಾಬ್‌ಗೂ ಈ ಗೆಲುವು ಅನಿವಾರ್ಯವಾಗಿತ್ತು. 8 ವಿಕೆಟ್‌ಗಳ ಭರ್ಜರಿ ಗೆಲುವಿನಿಂದ ನಾಯಕ ಮಾಯಾಂಕ್‌ ಅಗರ್ವಾಲ್‌ ಬಹಳ ಖುಷಿಯಾಗಿದ್ದಾರೆ.
“ನಮ್ಮ ಬೌಲಿಂಗ್‌ ಉತ್ತಮ ಮಟ್ಟದಲ್ಲಿತ್ತು. ಆರಂಭದಲ್ಲೇ ನಮಗೆ ಯಶಸ್ಸು ಸಿಕ್ಕಿತು. ಮಿಡ್ಲ್ ಆರ್ಡರ್‌ನಲ್ಲೂ ನಾವು ಗುಜರಾತ್‌ಗೆ ಬ್ರೇಕ್‌ ಹಾಕಿದೆವು. ಹೀಗಾಗಿ 143ಕ್ಕೆ ನಿಯಂತ್ರಿಸಲು ಸಾಧ್ಯವಾಯಿತು’ ಎಂದು ಅಗರ್ವಾಲ್‌ ಹೇಳಿದರು.

“ನಮ್ಮ ಚೇಸಿಂಗ್‌ ಅಮೋಘ ಮಟ್ಟದಲ್ಲಿತ್ತು. ಧವನ್‌-ರಾಜಪಕ್ಸ ಉಪಯುಕ್ತ ಜತೆಯಾಟ ನಡೆಸಿದರು. ಲಿವಿಂಗ್‌ಸ್ಟೋನ್‌ ಅಬ್ಬರ ನಂಬಲಸಾಧ್ಯ ಮಟ್ಟದಲ್ಲಿತ್ತು. ಅವರಿಗೆ ಪೂರ್ತಿ ಸ್ವಾತಂತ್ರ್ಯ ನೀಡಲಾಗಿದೆ. ಅದರ ಪರಿಣಾಮವಿದು…’ ಎಂದರು ಅಗರ್ವಾಲ್‌.

Advertisement

Udayavani is now on Telegram. Click here to join our channel and stay updated with the latest news.

Next