ಮುಧೋಳ: ಒಂದೇ ದಿನದಲ್ಲಿ 170 ಟನ್ ಕಬ್ಬು ಕಡಿದು ಕಾರ್ಖಾನೆಗೆ ಸಾಗಿಸುವ ಮೂಲಕ ತಾಲೂಕಿನ ಕುಳಲಿ ಗ್ರಾಮದ ಜೈ ಹನುಮಾನ ಕಬ್ಬಿನ ಗ್ಯಾಂಗ್ ಸದಸ್ಯರು ನೂತನ ದಾಖಲೆ ನಿರ್ಮಿಸಿದ್ದಾರೆ. ಗ್ರಾಮದ ಈರಪ್ಪ ಜಾಮಗೊಂಡ ಅವರ ಜಮೀನಿನಲ್ಲಿನ ಕಬ್ಬನ್ನು ಕಡಿದ ಗ್ಯಾಂಗ್ ಸದಸ್ಯರು ಜಮಖಂಡಿ ತಾಲೂಕಿನ ಸಾಯಿಪ್ರಿಯಾ ಕಾರ್ಖಾನೆಗೆ ಸಾಗಿಸಿದ್ದಾರೆ. ದಿನಪೂರ್ತಿ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದ ಗ್ಯಾಂಗ್ ಸದಸ್ಯರು ಊಟವಿಲ್ಲದೆ ನಿರಂತರ 18 ಗಂಟೆಗಳ
ಕಾಲ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದರು.
Advertisement
ನಸುಕಿನಜಾವ ಆರಂಭ: ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿನ ಕಬ್ಬಿನ ಗ್ಯಾಂಗ್ ಸದಸ್ಯರೆಲ್ಲ ನಸುಕಿನ ಜಾವದಲ್ಲಿಯೇಕಾರ್ಯಾರಂಭ ಮಾಡುತ್ತಾರೆ. ಅದೇ ರೀತಿ ಕುಳಲಿಯ ಜೈ ಹನುಮಾನ ಕಬ್ಬಿನ ಗ್ಯಾಂಗ್ ಸದಸ್ಯರು ಬೆಳಗಿನ ಜಾವ 3ಗಂಟೆಗೆ ಕಬ್ಬು
ಕಟಾವು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ರಾತ್ರಿ 9ಗಂಟೆವರೆಗೆ ನಿರಂತರವಾಗಿ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದರು. ಗ್ಯಾಂಗ್ ನವರಿಗೆ ಕಾರ್ಯ ಸ್ಥಳದಲ್ಲಿಯೇ ಸಹಾಯಕರು ನೀರಿನ ವ್ಯವಸ್ಥೆ ಕಲ್ಪಿಸಿ ಕಬ್ಬು ಕಟಾವು ಕಾರ್ಯಕ್ಕೆ ಹುರಿದುಂಬಿಸುವ ದೃಶ್ಯ ಕಂಡುಬರುತ್ತಿತ್ತು.
ಕುಳಲಿ ಗ್ರಾಮದಿಂದ ಹಿಪ್ಪರಗಿ ಗ್ರಾಮದ ಸರಹದ್ದಿನಲ್ಲಿರುವ ಸಾಯಿಪ್ರಿಯಾ ಕಾರ್ಖಾನೆಗೆ ಕಬ್ಬು ಸಾಗಿಸಲಾಗಿದೆ. ಒಟ್ಟು 8 ಸಾರಿಗೆಯಂತೆ ಒಟ್ಟು 18 ಟ್ರಾಕ್ಟರ್ ಟ್ರೇಲರ್‌ಗಳಲ್ಲಿ ಕಬ್ಬು ಸಾಗಣೆ ಮಾಡಲಾಗಿದೆ. ಕಬ್ಬು ಕಟಾವು ಮಾಡಿದಂತೆ ಹಿಂದಿನ ಸಹಾಯಕರು ಮಿಂಚಿನ ವೇಗದಲ್ಲಿ ಲೋಡ್ ಮಾಡಿ ಸಾಗಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಇದೆಲ್ಲದರ ಪರಿಣಾಮ ಕೇವಲ 18 ಗಂಟೆಯಲ್ಲಿ 170 ಟನ್ ಕಬ್ಬು ಕಟಾವು ಸಾಧ್ಯವಾಗಿದೆ. ಜೈ ಹನುಮಾನ ಕಬ್ಬಿನ ಗ್ಯಾಂಗ್: ಕುಳಲಿ ಗ್ರಾಮದಲ್ಲಿರುವ ನಗರಗಟ್ಟಿ ತೋಟದ ಜೈಹನುಮಾನ ಕಬ್ಬಿನ ಗ್ಯಾಂಗ್‌ನಲ್ಲಿ ಅಂದಾಜು 20 ಸದಸ್ಯರು ಕಾರ್ಯನಿರ್ವಹಿಸುತ್ತಾರೆ. ಹಲವಾರು ವರ್ಷಗಳಿಂದ ಕಬ್ಬು ಕಟಾವು ಕಾರ್ಯದಲ್ಲಿ ಈ ಗ್ಯಾಂಗ್ ಸದಸ್ಯರು ತೊಡಗಿಕೊಂಡಿದ್ದಾರೆ.ಇದೀಗ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿನ ಈರಪ್ಪ ಜಾಮಗೊಂಡ ಅವರ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದಾರೆ.
Related Articles
Advertisement
ನಮ್ಮ ಹೊಲದಲ್ಲಿನ ಕಬ್ಬು ಕಟಾವು ಕುಳಲಿ ಗ್ರಾಮದ ಜೈಹನುಮಾನ ಕಬ್ಬಿನ ಗ್ಯಾಂಗ್‌ನವರು ಬಂದಾಗ ಇದೊಂದು ಅಸಾಧ್ಯದ ಕೆಲಸವೆಂದು ಭಾವಿಸಿದ್ದೆ. ಆದರೆ ಕಬ್ಬು ಗ್ಯಾಂಗ್ ಸದಸ್ಯರು ಛಲ ಬಿಡದೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ನಿರಂತರಪರಿಶ್ರಮದಿಂದ 170 ಟನ್ ಕಬ್ಬು ಸಾಗಿಸಿ ದೊಡ್ಡ ಸಾಧನೆ ಮಾಡಿರುವುದು ನನಗೂ ಹೆಚ್ಚು ಸಂತಸವನ್ನುಂಟು ಮಾಡಿದೆ.
ಈರಪ್ಪ ಜಾಮಗೊಂಡ
ಕಬ್ಬಿನ ಹೊಲದ ಮಾಲೀಕ *ಗೋವಿಂದಪ್ಪ ತಳವಾರ