Advertisement
ಈ ಮಧ್ಯೆ ಇಬ್ಬರು ವಿದ್ಯಾರ್ಥಿಗಳ ತಾಯಂದಿರಿಗೆ ಕರೆ ಮಾಡಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಅತ್ಯಂತ ತ್ವರಿತವಾಗಿ ಏರ್‌ಲಿಫ್ಟ್ಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
Related Articles
Advertisement
17 ಮಂದಿಯ ಪೈಕಿ ಮಂಗಳೂರಿನ ನೈಮಿಷಾ, ಶೇಖ್ ಮೊಹಮ್ಮದ್ ತಾಹಾ, ಶಲ್ವಿನ್ ಪ್ರೀತಿ ಅರಾನ್ಹಾ ಈ ನಾಲ್ವರು ಗುರುವಾರ ಉಕ್ರೇನ್ ತೊರೆದು ಹಂಗೇರಿ ತಲುಪಿದ್ದಾರೆ. ಉಳಿದಂತೆ ಮಂಗಳೂರಿಗರಾದ ಅಂಡ್ರಿಯಾನಾ ಲೂವಿಸ್, ಪ್ರಣವ್ ಕುಮಾರ್, ಆಂಟೊನಿ ಪಿರೇರಾ, ಅನ್ಶಿತಾ ರೆಷಲ್ ಪದ್ಮಶಾಲಿ, ಅಹ್ಮದ್ ಸಾದ್ ಅರ್ಷದ್, ಮೊಹಮ್ಮದ್ ಮಶಾಲ್ ಆರಿಫ್, ಸಾಕ್ಷಿ ಸುಧಾಕರ್, ಪ್ರೀತಿ ಪೂಜಾರಿ, ಪೂಜಾ ಮಲ್ಲಪ್ಪ ಅತಿವಾಲ್ ವಿವಿಧ ರಾಷ್ಟ್ರಗಳ ಶಿಬಿರ ಗಳಲ್ಲಿದ್ದು, ಏರ್‌ಲಿಫ್ಟ್ಗೆ ಕಾಯುತ್ತಿದ್ದಾರೆ ಎಂದು ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ತಾತ್ಕಾಲಿಕ ಪಾಸ್‌ಪೋರ್ಟ್ :
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿದ್ದ ಮಂಗಳೂರಿನ ಅನೈನಾ ಗುರುವಾರ ಬೆಳಗ್ಗೆ ಪೋಲಂಡ್ ತಲುಪಿದ್ದಾರೆ. ಬುಧವಾರ 13 ಗಂಟೆಗಳ ಕಾಲ ಕಾದು ಬಳಿಕ ಉಕ್ರೇನ್ ಗಡಿ ದಾಟಿ ಪೋಲೆಂಡ್‌ಗೆ ಕಾಲಿಟ್ಟಿದ್ದಾರೆ. ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಪೋಲಂಡ್‌ನ ಹೊಟೇಲ್‌ನಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಈಕೆ ವ್ಯಾಸಂಗ ಮಾಡುತ್ತಿದ್ದ ಖಾರ್ಕಿವ್ ನಗರ ಸಂಪರ್ಕಿಸಲು ಏಜೆನ್ಸಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈಕೆಯ ಕೈಗೆ ಪಾಸ್‌ಪೋರ್ಟ್ ಸಿಕ್ಕಿಲ್ಲ. ಈ ಬಗ್ಗೆ ಅನೈನಾ ಉಕ್ರೇನ್ ಹಾಗೂ ಭಾರತೀಯ ರಾಯಭಾರ ಕಚೇರಿಗೆ ಟ್ವೀಟ್ ಹಾಗೂ ಮೇಲ್ ಮಾಡಿದ್ದರು. ಇದರಿಂದಾಗಿ ಪೋಲಂಡ್‌ನಲ್ಲಿ ಅನೈನಾಗೆ ತಾತ್ಕಾಲಿಕ ಪಾಸ್‌ಪೋರ್ಟ್ ನೀಡಲಾಗಿದೆ. ಇದೇ ಪಾಸ್‌ಪೋರ್ಟ್‌ನಲ್ಲಿ ಅನೈನಾ ತಾಯ್ನಾಡಿಗೆ ಆಗಮಿಸಲಿದ್ದಾರೆ. ಭಾರತದ “ಆಪರೇಷನ್ ಗಂಗಾ’ ಏರ್‌ಲಿಫ್ಟ್ ಯಾವಾಗ ಎನ್ನುವ ಮಾಹಿತಿ ಲಭ್ಯವಾಗಿಲ್ಲ ಎನ್ನುತ್ತಾರೆ ಆಕೆಯ ತಾಯಿ ಸಂಧ್ಯಾ.
ಸಚಿವ ಗಡ್ಕರಿ ಕರೆ ಮಾಡಿ ಅಭಯ :
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕ್ಲೇಟನ್ ತಾಯಿ ಒಲಿನ್ ಲಸ್ರಾದೋ ಹಾಗೂ ಅನೈನಾ ತಾಯಿ ಸಂಧ್ಯಾಗೆ ಗುರುವಾರ ಮಧ್ಯಾಹ್ನ ಕರೆ ಮಾಡಿ ಮಾತನಾಡಿದ್ದಾರೆ.
ಇವರಿಬ್ಬರು ಸೋಮವಾರ ಮಂಗಳೂರು ಭೇಟಿ ವೇಳೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸಹಿತ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ವತಃ ಸಚಿವ ನಿತಿನ್ ಗಡ್ಕರಿ ಕರೆ ಮಾಡಿ ಮಾತನಾಡಿದ್ದಾರೆ. ಕೂಡಲೇ ಇ ಮೇಲ್ ಮೂಲಕ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಇವರಿಗೂ ಮೇಲ್ ಮಾಡುವ ಮೂಲಕ ಸಚಿವ ಗಡ್ಕರಿ ಅವರು ಹಂಚಿಕೊಂಡಿದ್ದಾರೆ.
ಸ್ಲೊವಾಕಿಯಾದಲ್ಲಿ ಕೇಂದ್ರ ಸಚಿವರು; ವಿದ್ಯಾರ್ಥಿಗಳ ಜತೆ ಚರ್ಚೆ :
ಉಕ್ರೇನ್‌ನ ಯುದ್ಧ ಭೂಮಿಯಿಂದ ತಪ್ಪಿಸಿಕೊಂಡು ಸ್ಲೊವಾಕಿಯಾ ಗಡಿಯಲ್ಲಿ ಆಶ್ರಯ ಪಡೆದಿರುವ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಗುರುವಾರ ಕೇಂದ್ರ ಸಚಿವರ ತಂಡ ಭೇಟಿ ನೀಡಿ ಸಾಂತ್ವನ ಹೇಳಿದೆ. ಭಾರತದ ವಿವಿಧ ಭಾಗಗಳ ನೂರಾರು ವಿದ್ಯಾರ್ಥಿಗಳು ಉಕ್ರೇನ್‌ನಿಂದ ಸ್ಲೊವಾಕಿಯಾ ಗಡಿಯ ಮೂಲಕ ಸುರಕ್ಷಿತ ತಾಣದಲ್ಲಿ ಆಶ್ರಯ ಪಡೆದಿದ್ದು, ಅವರನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಗುರುವಾರ ಕೇಂದ್ರದ ಅಲ್ಪಸಂಖ್ಯಾಕ ವ್ಯವಹಾರಗಳ ಸಹಾಯಕ ಸಚಿವ ಕಿರಣ್ ರಿಜಿಜು ಅವರ ನೇತೃತ್ವದ ತಂಡ ಸ್ಲೊವಾಕಿಯಾಕ್ಕೆ ಭೇಟಿ ನೀಡಿದೆ.
ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ ಅವರು, ಯಾವುದೇ ಆತಂಕ ಬೇಡ. ನಾನೂ ನಿಮ್ಮ ಜತೆಗಿದ್ದು, ನಿಮ್ಮೆಲ್ಲರನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸುವುದಾಗಿ ವಿದ್ಯಾರ್ಥಿಗಳಿಗೆ ಸಚಿವರು ಭರವಸೆ ನೀಡಿದ್ದಾರೆ.
ಉಕ್ರೇನ್‌ನ ಯುದ್ಧ ನಡೆಯುತ್ತಿರುವ ಪ್ರದೇಶಗಳಲ್ಲಿ ಭಾರತದ ನಿಮ್ಮ ಸ್ನೇಹಿತರು ಬಾಕಿಯಾಗಿದ್ದಲ್ಲಿ ಅವರನ್ನು ಕೂಡ ಅತ್ಯಂತ ಸುರಕ್ಷಿತವಾಗಿ ಭಾರತಕ್ಕೆ ಕರೆದೊಯ್ಯಲು ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆ ಎಂಬ ಸಂದೇಶವನ್ನು ಅವರಿಗೆ ಕಳುಹಿಸುವಂತೆ ಕೇಂದ್ರ ಸಚಿವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಸ್ಲೊವಾಕಿಯದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ತಂಡದಲ್ಲಿ ಮೂರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರೂ ಇದ್ದಾರೆ.