ದಾವಣಗೆರೆ: ಅಡಕೆ ವ್ಯಾಪಾರಿಯನ್ನ ಬೆದರಿಸಿ 17 ಲಕ್ಷ ನಗದು, ಮೊಬೈಲ್ ದೋಚಿದ್ದ 7 ಜನ ದರೋಡೆ ಕೋರರ ಬಂಧಿಸಿರುವ ಚನ್ನಗಿರಿ ಪೊಲೀಸರು 7.37 ಲಕ್ಷ ನಗದು, ದರೋಡೆಗೆ ಬಳಸಿದ್ದ ಎರಡು ಕಾರು, ಬೈಕ್, 9 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿಯ ಮಹ್ಮತ್ ಇನಾಯತ್(21). ಉಮ್ಮರ್ ಫಾರೂಕ್(20), ಷಬುದ್ದೀನ್ ಖಾಜಿ (24), ಮೈಸೂರಿನ ಸಲ್ಮಾನ್ ಅಹಮ್ಮದ್ ಖಾನ್( 25), ಸೈಯದ್ ಸೈಫುಲ್ಲಾ (೨೪), ಖಾಷಿಪ್ ಅಹಮ್ಮದ್(೨೫), ತುಮಕೂರು ಜಿಲ್ಲೆಯ ಖುರಂ ಖಾನ್(೨೫) ಬಂಧಿತರು.
ಸೆ.೩೦ ರಂದು ಚನ್ನಗಿರಿ ಪಟ್ಟಣದ ಅಡಕೆ ವ್ಯಾಪಾರಿ ಮಹ್ಮದ್ ಇನಾಯುತುಲ್ಲಾ ಜೋಳದಾಳ ಮತ್ತು ಕಲ್ಲಾಪುರ ಗ್ರಾಮಗಳಲ್ಲಿ ೩೫ ಚೀಲ ಅಡಕೆ ಇದೆ ವ್ಯಾಪಾರ ಮಾಡಿಸಿಕೊಡುತ್ತೇನೆ ಎಂದು ಬುಳಸಾಗರದ ಅಶೋಕ ಎಂಬುವರನ್ನ ಕರೆದುಕೊಂಡು ಹೋಗಿದ್ದರು. ಅಶೋಕ್ ಒಟ್ಟು ೧೭.೨೪ ಲಕ್ಷ ರೂಪಾಯಿ ತೆಗೆದುಕೊಂಡು ಬೊಲೇರೋ ಪಿಕಪ್ ಗೂಡ್ಸ್ ವಾಹನದಲ್ಲಿ ಜೋಳದಾಳ್ ಕಡೆಗೆ ಹೋಗುತ್ತಿರುವಾಗ ಅರಣ್ಯಪ್ರದೇಶದಲ್ಲಿ ನೈಸರ್ಗಿಕ ಕರೆಗಾಗಿ ವಾಹನ ನಿಲ್ಲಿಸುವಂತೆ ಎಂದು ಮಹ್ಮದ್ ಇನಾಯುತುಲ್ಲಾ ಹೇಳಿದ್ದರಿಂದ ರಸ್ತೆ ಪಕ್ಕಕ್ಕೆ ನಿಲ್ಲಿಸುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಬಂದ ೭ ರಿಂದ ೮ ಜನರು ಅಶೋಕನನ್ನು ಹೆದರಿಸಿ ೧೭. ೨೪ ಲಕ್ಷ ನಗದು, ಮೊಬಲ್ ಮತ್ತು ಗೂಡ್ಸ್ ವಾಹನದ ಕೀ ಕಿತ್ತುಕೊಂಡು ಪರಾರಿಯಾಗಿದ್ದರು.
ಅಶೋಕ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಚನ್ನಗಿರಿ ಪೊಲೀಸರು ಅಡಕೆ ಕೊಡಿಸುತ್ತೇನೆ ಎಂದು ಹೇಳಿದ್ದ ಮಹ್ಮದ್ ಇನಾಯತುಲ್ಲಾ ನನ್ನ ವಿಚಾರಣೆ ನಡೆಸಿ ಮಹ್ಮತ್ ಇನಾಯತ್, ಉಮ್ಮರ್ ಫಾರೂಕ್, ಶಾಹಿದ್ ಖಾಜಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಮೈಸೂರಿನ ತಂಡದ ಜೊತೆ ಅಡಕೆ ಕೊಡಿಸುವುದಾಗಿ ಅಶೋಕ್‌ಗೆ ನಂಬಿಸಿ ದರೋಡೆ ಮಾಡುವ ಸಂಚು ರೂಪಿಸಿದ್ದು, ಬೆಳಕಿಗೆ ಬಂದಿತು. ಎಲ್ಲ ದರೋಡೆಕೋರರ ಬಂಧಿಸಿ ೭,೩೭,೯೨೦ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ೪ ವಾಹನ, ೯ಮೊಬೈಲ್ ವಶಪಡಿಸಿಕೊಂಡಿದ್ದಾರೆ. ದರೋಡೆ ನಡೆದ ಎರಡೇ ದಿನದಲ್ಲಿ ಆರೋಪಿತರ ಬಂಧಿಸಿದ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಾಂತ್ ನಗದು ಬಹುಮಾನ ಘೋಷಿಸಿದ್ದಾರೆ.