ಕಾಸರಗೋಡು: ವಿದೇಶಿ ಕಂಪೆನಿಗಳ ಬ್ಯಾಂಕ್ ಮಾಹಿತಿ ಸೋರಿಕೆ ನಡೆಸಿ ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ ಅವುಗಳ ಮೂಲಕ ಎಟಿಎಂ ಕೌಂಟರ್‌ಗಳಿಂದ ಹಣ ಎಗರಿಸುವ ಅಂತಾರಾಜ್ಯ ವಂಚನಾ ಜಾಲ ಪತ್ತೆಯಾಗಿದೆ,
ಬಂಧಿತ ನಾಲ್ವರಿಂದ 17 ಎಟಿಎಂ ಕಾರ್ಡ್‌ಗಳು, ಲ್ಯಾಪ್‌ಟಾಪ್, 2 ಮೊಬೈಲ್ ಫೋನ್‌ಗಳು, ಎಟಿಎಂ ಸ್ಪೈಪಿಂಗ್ ಮೆಶಿನ್ ಮತ್ತು ಅವರು ಪ್ರಯಾಣಿಸುತ್ತಿದ್ದ ತೊಡುಪುಳ ನೋಂದಾವಣೆಯ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳ ಇ ಮೈಲ್ ಸಹಿತ ಇತರ ಮಾಹಿತಿಗಳನ್ನು ಸೈಬರ್ ಸೆಲ್ ಮೂಲಕ ತನಿಖೆ ನಡೆಸಿದಲ್ಲಿ ಮಾತ್ರವೇ ಹೆಚ್ಚಿನ ಮಾಹಿತಿಗಳು ಮತ್ತು ಅದರಲ್ಲಿ ಶಾಮೀಲಾಗಿರುವ ಇತರ ಕೊಂಡಿಗಳ ಮಾಹಿತಿ ಲಭಿಸಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಬರ್ ಸೆಲ್ ಕೂಡಾ ತನಿಖೆ ನಡೆಸುತ್ತಿದೆ.
ಈ ತಂಡ 50 ಲಕ್ಷ ರೂ.ಗಿಂತಲೂ ಅಧಿಕ ಹಣ ಎಗರಿಸಿದ್ದಾಗಿ ತನಿಖೆಯಿಂದ ಸ್ಪಷ್ಟಗೊಂಡಿದೆ. ಬಂಧಿತ ಜಯರಾಮ್‌ನ ಸಂಬಂಧಿಕ ಮದನ್ ಕಣ್ಣನ್ ಕೆನಡಾದಲ್ಲಿ ಉದ್ಯೋಗದಲ್ಲಿದ್ದು ಆತ ವಿದೇಶ ಕಂಪೆನಿಗಳ ಪಾಸ್ ವರ್ಡ್‌ಗಳನ್ನು ಕಂಪ್ಯೂಟರ್ ಬಳಸಿ ಹ್ಯಾಕ್ ಮಾಡಿ ಆ ಮಾಹಿತಿಗಳನ್ನು ಜಯರಾಮ್‌ಗೆ ರವಾನಿಸುತ್ತಿದ್ದನು. ಆ ಮಾಹಿತಿ ಆಧಾರದಲ್ಲಿ ಈ ಜಾಲ ನಕಲಿ ಎಟಿಎಂ ಕಾರ್ಡ್ ತಯಾರಿಸಿ ಎಟಿಎಂ ಕೌಂಟರ್‌ಗಳಿಂದ ಹಣ ಲಪಟಾಯಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ತ್ರಿಚ್ಚಿನಾಪಳ್ಳಿ ತಾನೂರು ಇನಾಂದಾರ್ ತೋಪ್ಪಿಲ್ ಪಿ.ಜಯರಾಂ(30), ಕಣ್ಣೂರು ಕರಿಕಾಯಂ ಮಣಕಡವಿನ ಆಲ್ವಿನ್ ಕೆ.ವಿ(25), ಕಲ್ಲಿಕೋಟೆ ನಿವಾಸಿ ಅಖೀಲ್ ಜಾರ್ಜ್(27) ಮತ್ತು ಕೋಟ್ಟಯಂ ರಾಮಪುರಂ ಏಳುಚೇರಿಯ ಎ.ಎಸ್.ಸಂದು ನೆಪೋಲಿಯನ್(21)ನನ್ನು ಬಂಧಿಸಲಾಗಿದೆ.