ಮಹಾಲಿಂಗಪುರ: ಇದೇ ಅಗಷ್ಟ್ 16 ರೊಳಗೆ ರಾಜ್ಯ ಸರ್ಕಾರವು ಮಹಾಲಿಂಗಪೂರ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಿಸಬೇಕು. ಇಲ್ಲದಿದ್ದರೆ ಅಗಷ್ಟ್ 17 ರಂದು ಮಹಾಲಿಂಗಪುರ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ, ಹೋರಾಟದ ಸ್ವರೂಪವನ್ನು ತೀವ್ರಮಟ್ಟಕ್ಕೆ ಬದಲಿಸುವದಾಗಿ ನಿರ್ಣಯ ಕೈಗೊಳ್ಳಲಾಯಿತು.
ಬುಧವಾರ ಪಟ್ಟಣದ ಕೌಜಲಗಿ ನಿಂಗಮ್ಮ ರಂಗಮಂದಿರದಲ್ಲಿ ಮಹಾಲಿಂಗಪೂರ ತಾಲೂಕು ಹೋರಾಟ ಸಮಿತಿಯಿಂದ ಹೋರಾಟದ ಮುಂದಿನ ರೂಪರೇಷೆಗಳ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿದ ಬಹುತೇಕರು ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ಮುಂದುವರೆಯಲಿ, ಅಗಷ್ಟ್ 17 ರ ಮಹಾಲಿಂಗಪುರ ಬಂದ್ ನಂತರ ತಾಲೂಕು ಹೋರಾಟದ ಸ್ವರೂಪವನ್ನು ಉಗ್ರರೂಪಕ್ಕೆ ಬದಲಿಸಲು ಸಹಮತ ವ್ಯಕ್ತಪಡಿಸಿದರು.
ಮಹಾಲಿಂಗಪುರ ಹೋರಾಟ ಸಮಿತಿಯ ಮಹಾಲಿಂಗಪ್ಪ ಕೋಳಿಗುಡ್ಡ, ಪುರಸಭೆಯ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಮಾತನಾಡಿ ಸರ್ಕಾರವು ಶೀಘ್ರದಲ್ಲೇ ಹೊಬಳಿ ಕೇಂದ್ರವನ್ನಾಗಿ ಘೋಷಿಸುತ್ತದೆ. ಅದನ್ನು ಒಪ್ಪಿಕೊಂಡು ಹೋರಾಟ ಮೊಟಕುಗೊಳಿಸೋಣ ಎನ್ನುತ್ತಿದ್ದಂತೆ ಸಭೆಯಲ್ಲಿ ಭಾಗವಹಿಸಿದ ಮುಖಂಡರು, ತಾಲೂಕು ಹೋರಾಟ ಸಮೀತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ವೇದಿಕೆಯನ್ನು ತೆರವುಗೊಳಿಸುವದಿಲ್ಲ. ತಾಲೂಕು ಹೋರಾಟ ಆಗುವರೆಗೂ ಹೋರಾಟವನ್ನು ನಿಲ್ಲಿಸುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರೆಪ್ಪ ಸಾಂಗ್ಲೀಕರ, ಮಹಾಂತೇಶ ಹಿಟ್ಟಿನಮಠ, ರಂಗನಗೌಡ ಪಾಟೀಲ, ಸಿದ್ದು ಪಾಟೀಲ, ವಿರೇಶ ಆಸಂಗಿ, ಅರ್ಜುನ ಹಲಗಿಗೌಡರ, ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ, ಜಾವೇದ ಬಾಗವಾನ, ಚನ್ನಬಸು ಹುರಕಡ್ಲಿ, ನ್ಯಾಯವಾದಿ ಎಂ.ಎಸ್.ಮನ್ನಯ್ಯನವರಮಠ, ಸುರೇಶ ಮಡಿವಾಳರ, ಮಲ್ಲಪ್ಪ ಸಿಂಗಾಡಿ, ಶಂಕರ ಹುಕ್ಕೇರಿ, ಸಂಗಪ್ಪ ಹಲ್ಲಿ, ಮಹಾದೇವ ಮೇಟಿ, ಶಿವಾನಂದ ತಿಪ್ಪಾ, ಮನೋಹರ ಶಿರೋಳ ಮಾತನಾಡಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಮಹಾಲಿಂಗಪುರ ತಾಲೂಕು ಆಗುವರೆಗೂ ಹೋರಾಟ ಮುಂದುವರೆಯಲಿ ಎಂದರು.
ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಸದಸ್ಯ ಯಲ್ಲನಗೌಡ ಪಾಟೀಲ, ಮುಖಂಡರಾದ ಆರ್.ಟಿ.ಪಾಟೀಲ, ಈರಪ್ಪ ದಿನ್ನಿಮನಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಜಮೀರ ಯಕ್ಸಂಬಿ, ಶೇಖರ ಅಂಗಡಿ, ಚನ್ನು ದೇಸಾಯಿ, ಪ್ರಕಾಶ ಚನ್ನಾಳ, ಶಿವನಗೌಡ ಪಾಟೀಲ, ಈಶ್ವರ ಚಮಕೇರಿ, ಮುಸ್ತಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಸಿದ್ದು ಶಿರೋಳ, ಪಂಡಿತ ಪೂಜೇರಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಅಸ್ಲಂ ಕೌಜಲಗಿ ಸೇರಿದಂತೆ ಹಲವರು ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಭಾಗವಹಿಸಿದ್ದರು.
ಮುಖಂಡರಿಂದ ಕೇಳಿಬಂದ ಪ್ರಮುಖ ವಿಷಯಗಳು
ತಾಲೂಕು ಹೋರಾಟದ ಈವರೆಗಿನ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ನೂತನ ತಾಲೂಕು ಹೋರಾಟ ಸಮೀತಿ ರಚಿಸುವದು, ಪಕ್ಷಾತೀತವಾಗಿ ತಾಲೂಕು ಆಗುವರೆಗೂ ನಿಶ್ವಾರ್ಥವಾಗಿ ಹೋರಾಟ ಮಾಡುವಂತರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವದು, ಮಹಾಲಿಂಗಪುರ ಮತ್ತು ಸಂಬಂಧಿಸಿದ ಎಲ್ಲಾ ಗ್ರಾಮಗಳ ಹಿರಿಯರನ್ನು ಒಳಗೊಂಡಂತೆ ವಿವಿಧ ಉಪ ಸಮಿತಿಗಳ ರಚನೆ, ಹೋರಾಟದಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯದೇ ಒಗ್ಗಟ್ಟಿನ ಪ್ರದರ್ಶನ ಮಾಡುವದು, ಹೋರಾಟ ಉದ್ದೇಶ ಯಾರ ಮತ್ತು ಯಾವ ಪಕ್ಷದ ವಿರುದ್ಧವಲ್ಲ, ಅದು ಕೇವಲ ಮಹಾಲಿಂಗಪುರ ತಾಲೂಕು ರಚನೆಗಾಗಿ ಎಂಬ ಸಿದ್ದಾಂತಕ್ಕೆ ಸರ್ವರು ಬದ್ದರಾಗಿ ಹೋರಾಟ ಮುಂದುವರೆಸಿದಾಗ ಮಾತ್ರ ತಾಲೂಕು ಹೋರಾಟ ಯಶಸ್ವಿಯಾಗಲು ಸಾಧ್ಯ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಪ್ರಮುಖಂಡರಿಂದ ಕೇಳಿಬಂದವು.