Advertisement

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

03:11 PM Jan 10, 2025 | sudhir |

ವಿಜಯಪುರ: ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 16ನೇ ಘಟಿಕೋತ್ಸವದಲ್ಲಿ ರೈತ, ಕುರಿಗಾಯಿ ಮತ್ತು ಕೂಲಿಕಾರ ಕುಟುಂಬದ ವಿದ್ಯಾರ್ಥಿನಿಯರು ಚಿನ್ನದ ಪದಕಗಳನ್ನು ಬಾಚಿಕೊಂಡರು. ಕೆಲ ವಿದ್ಯಾರ್ಥಿಯರು ತಮ್ಮ ತಂದೆ ಅಗಲಿಕೆಯಿಂದ ತಾಯಿಯ ಆಶ್ರಯದಲ್ಲೇ ಉನ್ನತ ಶಿಕ್ಷಣ ಪಡೆದು ಬಡತನವನ್ನು ಮೆಟ್ಟಿ ನಿಂತ ಸಂತೋಷದಲ್ಲಿದ್ದರು. ಅಲ್ಲದೇ, ಸಾಧಕ ವಿದ್ಯಾರ್ಥಿನಿಯರು ತಮಗೆ ಅರಿವಾಗದಂತೆ ಆನಂದಭಾಷ್ಪ ಸುರಿಸಿ ಬಂಗಾರದ ನಗೆ ಬೀರಿದರು. ಮಕ್ಕಳ ಸಾಧನೆ, ಸಂಭ್ರಮದ ಕಣ್ತುಂಬಿಕೊಂಡ ಹೆತ್ತವರು, ಪೋಷಕರು ಹಾಗೂ ಕುಟುಂಬಸ್ಥರು ಹೆಮ್ಮೆ, ಸಂತೃಪ್ತಿ ಭಾವ ವ್ಯಕ್ತಪಡಿಸಿದರು.

Advertisement

ಮಹಿಳಾ ವಿಶ್ವವಿದ್ಯಾಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಲ್ಲಿ 13,461 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ ಹೆಚ್ಚು ಅಂಕ ಪಡೆದ 63 ವಿದ್ಯಾರ್ಥಿನಿಯರು 80 ಚಿನ್ನದ ಪದಕಗಳು ಮತ್ತು 34 ವಿದ್ಯಾರ್ಥಿನಿಯರು ಪಿಎಚ್‌ಡಿ ಪದವಿಗಳನ್ನು ಪಡೆದರು. ಕನ್ನಡ ವಿಭಾಗದ ಮಂದಿರಾ ತೆಲಗಡೆ, ಸಮಾಜಶಾಸ್ತ್ರ ವಿಭಾಗದ ಶಿಲ್ಪಾ ಸತ್ತಪ್ಪ ಪಡೆಪ್ಪಗೊಳ, ಅರ್ಥಶಾಸ್ತ್ರ ವಿಭಾಗದ ಪಲ್ಲವಿ ಯರನಾಳ, ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಭಾಗದ ವನಿತಾ ಸಾವಂತ ಹಾಗೂ ಎಂ.ಪಿ.ಎಡ್ ವಿಭಾಗದ ಸೌಜನ್ಯ ಜಿಂಜರವಾಡ ಅತ್ಯಧಿಕ ತಲಾ ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.

ಕುರಿಗಾರಿಯ ಮಗಳಿಗೆ 3 ಚಿನ್ನ: ಕನ್ನಡ ವಿಭಾಗದಲ್ಲಿ ಬಾಲಗಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ವಿದ್ಯಾರ್ಥಿನಿ ಮಂದಿರಾ ತೆಲಗಡೆ ಮೂರು ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡು ಗಮನ ಸೆಳೆದರು. “ನಮ್ಮ ತಂದೆ ಹನುಮಂತ ಕುರಿಗಾರಿಯಾಗಿದ್ದರೆ, ತಾಯಿ ರೇಣುಕಾ ಕೂಲಿ ಕೆಲಸ ಮಾಡುತ್ತಾರೆ. ನಾವು ಒಟ್ಟು ಆರು ಜನ ಮಕ್ಕಳು. ನಾಲ್ವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ತಮ್ಮಂದಿರು ಇದ್ದಾರೆ. ಬಡತನ ಕುಟುಂಬದಿಂದ ಬಂದಿರುವ ನನಗೆ ಕುಟುಂಬದ ಪರಿಸ್ಥಿತಿಯ ಬಗ್ಗೆ ಅರಿತ್ತು. ಇದೇ ಛಲದಲ್ಲಿ ತಾಯಿಯ ತವರೂರಾದ ಮುಧೋಳ ತಾಲೂಕಿನ ಮಿರ್ಜಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದೆ. ಆರಂಭದಿಂದಲೂ ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂಬ ಇಚ್ಛೆ ಇತ್ತು. ಪಿಯುಸಿಯಲ್ಲೂ ಉತ್ತಮ ಅಂಕ ಗಳಿಸಿದ್ದೆ. ಈಗ ಚಿನ್ನದ ಪದಕದೊಂದಿಗೆ ರ‍್ಯಾಂಕ್‌ನಲ್ಲಿ ಪಾಸ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ. ಮುಂದೆ ನೆಟ್, ಸೆಟ್ ಪಾಸ್ ಮಾಡಿ ಒಳ್ಳೆಯ ಪ್ರಾಧ್ಯಾಪಕಿಯಾಗುವ ಗುರಿ ಇದೆ” ಎಂದು ಮಂದಿರಾ ತೆಲಗಡೆ ತಿಳಿಸಿದರು.

ಆಟೋ ಡ್ರೈವರ್ ಪುತ್ರಿಗೆ 3 ಬಂಗಾರ: ಬೆಂಗಳೂರು ಮೂಲದ ವನಿತಾ ಸಾವಂತ ಆಹಾರ ಸಂಸ್ಕರಣೆ ಮತ್ತು ಪೋಷಕಾಂಶ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡರು. “ನಮ್ಮದು ಮೂಲತಃ ಬೀದರ್ ಜಿಲ್ಲೆ. ತಂದೆ ಪ್ರಮೋದ್ ಸಾವಂತ ಆಟೋ ಚಾಲಕರು, ತಾಯಿ ಗೃಹಿಣಿಯಾಗಿದ್ದು, ಸುಮಾರು 30 ವಷಗಳ ಹಿಂದೆಯೇ ನಮ್ಮ ಕುಟುಂಬ ಬೆಂಗಳೂರಿಗೆ ಹೋಗಿ ನೆಲೆಸಿದೆ. ನಾನು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಇಡೀ ಓದು ಅಲ್ಲಿಯೇ ಮಾಡಿದ್ದೇನೆ. ಮುಂದೆ ಪಿಎಚ್‌ಡಿ ಮಾಡುವ ಉದ್ದೇಶ ಹೊಂದಲಾಗಿದೆ” ಎಂದು ವನಿತಾ ಹೇಳಿದರು.

Advertisement

ಕ್ರಿಕೆಟರ್‌ಗೂ 3 ಚಿನ್ನದ ಪದಕ: ಎಂ.ಪಿ.ಎಡ್ ವಿಭಾಗದಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸೌಜನ್ಯ ಜಿಂಜರವಾಡ ಕೂಡ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. “ನಾನು ರೈತ ಕುಟುಂಬದ ವಿಠ್ಠಲ್ ಜಿಂಜರವಾಡ ಹಾಗೂ ಮಹಾದೇವಿ ದಂಪತಿಯ ಪುತ್ರಿ. ಕ್ರಿಕೆಟ್, ಬಾಸ್ಕೆಟ್ ಬಾಲ್ ಹಾಗೂ ಹ್ಯಾಂಡ್‌ಬಾಲ್ ಪಟು ಆಗಿದ್ದೇನೆ. ವಿವಿಧ ರಾಜ್ಯಗಳಲ್ಲಿ ನಡೆದ ಅಂತರ್ ವಿವಿಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಏಳು ಬಾರಿ ಪಾಲ್ಗೊಂಡಿರುವೆ. ಸದ್ಯ ಬೆಂಗಳೂರಿನಲ್ಲಿ ವೈಎಂಸಿಎ ಕಾಲೇಜಿನಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಚಿನ್ನದ ಪದಕಗಳನ್ನು ಪಡೆದಿರುವುದು ಖುಷಿ ನೀಡಿದೆ” ಎಂದು ಸೌಜನ್ಯ ತಮ್ಮ ಸಂತಸ ಹಂಚಿಕೊಂಡರು.

ಮೆಹಂದಿ ಹಣದಲ್ಲಿ ಉನ್ನತ ಶಿಕ್ಷಣ: ಹಿಂದಿ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದ ಬೆಳಗಾವಿ ಜಿಲ್ಲೆಯ ಚಿಕ್ಕುಂಬಿ ಗ್ರಾಮದ ಆಫ್ರೀನ್ ಶಿಲೇದಾರ್ ತಮ್ಮ 18ನೇ ವಯಸ್ಸಿನಿಂದ ತಾವೇ ದುಡಿದು, ಅದರಿಂದ ಬಂದ ಹಣದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಫ್ರೀನ್ ಅವರ ಚಿಕ್ಕ ವಯಸ್ಸಿನಲ್ಲೇ ತಂದೆ ನಿಧನ ಹೊಂದಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಮೂವರು ಹೆಣ್ಣು ಮಕ್ಕಳೇ ಇದ್ದಾರೆ. ಧಾರವಾಡದಲ್ಲಿ ಪದವಿ ಮುಗಿಸಿರುವ ಆಫ್ರೀನ್, ಕಾಲೇಜಿನ ನಂತರ ಮದುವೆ ಮನೆಗಳಲ್ಲಿ ಮೇಹಂದಿ ಹಾಕುತ್ತಾರೆ. ಜತೆಗೆ ಬ್ಯೂಟಿ ಪಾರ್ಲರ್ ತರಬೇತಿ ಪಡೆದುಕೊಂಡಿದ್ದು, ಈ ದುಡುಮೆಯ ಹಣವನ್ನೇ ತಮ್ಮ ಶಿಕ್ಷಣಕ್ಕೆ ಆಸರೆ ಮಾಡಿಕೊಂಡಿದ್ದಾರೆ. ಬಿಇಡಿ ಕೂಡ ಮುಗಿಸಿರುವ ಆಫ್ರೀನ್, “ಮುಂದೆ ಪಿಎಚ್‌ಡಿ ಮಾಡಬೇಕು. ಜತೆಗೆ ವೃತ್ತಿ ಕೌಶಲ್ಯಯನ್ನು ಮುಂದುವರೆಸಿಕೊಂಡು ಸರ್ಕಾರಿ ನೌಕರಿ ಪಡೆಯುವ ಆಸೆ ಇದೆ” ಎಂದು ಹೇಳಿದರು.

ಜತೆಗೆ ಸಮಾಜಶಾಸ್ತ್ರ ವಿಭಾಗದ ಶಿಲ್ಪಾ ಸತ್ತಪ್ಪ ಪಡೆಪ್ಪಗೊಳ ಮತ್ತು ಅರ್ಥಶಾಸ್ತ್ರ ವಿಭಾಗದ ಪಲ್ಲವಿ ಯರನಾಳ ಸಹ ತಲಾ ಮೂರು ಚಿನ್ನದ ಪದಕಗಳಿಗೆ ಭಾಜನರಾದರು. ಉಳಿದ ವಿದ್ಯಾರ್ಥಿನಿಯರು ಎರಡು ಹಾಗೂ ಒಂದು ಚಿನ್ನದ ಪದಕಗಳನ್ನು ಸ್ವೀಕರಿಸಿದರು.

ನಾನು ಕುರಿ ಕಾಯುತ್ತೇನೆ. ಮಗಳು ಕಲಿಯಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಳು. ಹೀಗಾಗಿ ಶಾಲೆಗೆ ಸೇರಿಸಿದ್ದೇವು. ಕಷ್ಟದ ಜೀವನದ ನಡುವೆಯೂ ಓದಿಸಿದ್ದೇವೆ. ಮಗಳು ಇವತ್ತು ನಮಗೆ ಹೆಸರು ತಂದಿದ್ದಾಳೆ. ನಮಗೆ ಈ ಖುಷಿಯೇ ಸಾಕು.
– ಹನುಮಂತ, 3 ಚಿನ್ನದ ಪದಕ ಪಡೆದ ಮಂದಿರಾಳ ತಂದೆ

Advertisement

Udayavani is now on Telegram. Click here to join our channel and stay updated with the latest news.

Next