ಮಂಗಳೂರು: ಕರ್ನಾಟಕ ಕರಾವಳಿಯಲ್ಲಿ ಕೋವಿಡ್ ಸೋಂಕು ಕಂಟಕ ಮುಂದುವರಿದಿದೆ. ಬುಧವಾರ 183 ಹೊಸ ಕೋವಿಡ್ -19 ಸೋಂಕು ಪ್ರಕರಣಗಳನ್ನು ಕಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೆ 168 ಹೊಸ ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಇಂದು ಜಿಲ್ಲೆಯ ಬಂಟ್ವಾಳ, ಉಳ್ಳಾಲ ಭಾಗದಲ್ಲಿ ಹೆಚ್ಚಿನ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ.
ನಿನ್ನೆಯ ಭಾರಿ ಕೋವಿಡ್ ಸೋಂಕು ಪ್ರಕರಣಗಳಿಂದ 1500ರ ಗಡಿ ದಾಟಿದ್ದ ಜಿಲ್ಲೆಯ ಕೋವಿಡ್ -19 ಸೋಂಕಿತರ ಸಂಖ್ಯೆ ಇಂದಿನ 168 ಹೊಸ ಪ್ರಕರಣಗಳ ಕಾರಣದಿಂದ 1702ಕ್ಕೆ ಏರಿಕೆ ಕಂಡಿದೆ.
ಜಿಲ್ಲೆಯ ಉಳ್ಳಾಲ ಭಾಗದಲ್ಲಿ ಕೋವಿಡ್ -19 ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಇಂದು ಉಳ್ಳಾಲ ಭಾಗದಲ್ಲಿ 30ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಭಾಗದಲ್ಲಿ ರಾಂಡಮ್ ಟೆಸ್ಟ್ ನಡೆಸಿದಾಗ ಹಲವುಲ್ಲಿ ಕೋವಿಡ್ ಸೋಂಕು ಇರುವುದು ದೃಢವಾಗಿತ್ತು.
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 1 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1 ಪ್ರಕರಣ ಸೇರಿದಂತೆ ಗುರುವಾರದಂದು ಪುತ್ತೂರಿನಲ್ಲಿ 2 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ನಗರಸಭಾ ವ್ಯಾಪ್ತಿಯ ಬೊಳುವಾರು ಮಿಷನ್ ಗುಡ್ಡೆ ನಿವಾಸಿ 56 ವರ್ಷದ ಮಹಿಳೆ ಅನಾರೋಗ್ಯದ ಕಾರಣದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಕೋವಿಡ್ ದೃಢಪಟ್ಟಿದೆ. ಈಶ್ವರಮಂಗಲ ನಿವಾಸಿ 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜ್ವರದ ಹಿನ್ನೆಲೆಯಲ್ಲಿ ದಾಖಲಾಗಿದ್ದರು. ಇವರ ಗಂಟಲು ದ್ರವ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಕೋವಿಡ್ ದೃಢಪಟ್ಟ ಇಬ್ಬರ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.