Advertisement

ಗಣೇಶ ಪ್ರತಿಷ್ಠಾಪನೆಗೆ 1659 ಅರ್ಜಿ; : ಎಸ್ಪಿ ಉಮಾ ಪ್ರಶಾಂತ್‌

05:56 PM Aug 25, 2022 | Team Udayavani |

ಚಿಕ್ಕಮಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾದ್ಯಂತ 1659 ಅರ್ಜಿಗಳು ಬಂದಿದ್ದು, 34 ಅತಿ ಸೂಕ್ಷ್ಮ ಹಾಗೂ 175 ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್‌ ತಿಳಿಸಿದರು.

Advertisement

ಬುಧವಾರ ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ನ್ಯಾಯಾಲಯದ ನಿರ್ದೇಶನದಂತೆ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದರು.

ಜಿಲ್ಲೆಯಲ್ಲಿ 730 ಹೋಂ ಸ್ಟೇಗಳು ಇದ್ದು, 503 ಹೋಂ ಸ್ಟೇಗಳು ಪರವಾನಗಿ ಪಡೆದುಕೊಂಡಿವೆ. ಉಳಿದ ಹೋಂ ಸ್ಟೇಗಳು ಪರವಾನಗಿ ಪಡೆದುಕೊಂಡಿವೆಯೇ ಅಥವಾ ಇಲ್ಲವೇ ಎಂದು ಸರ್ವೇ ನಡೆಸಲಾಗುತ್ತಿದೆ. ಪರವಾನಗಿ ಪಡೆಯದಿರುವ ಹೋಂ ಸ್ಟೇಗಳನ್ನು ಮುಚ್ಚಿಸಲಾಗುವುದು ಎಂದು ತಿಳಿಸಿದರು.

ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ದೂರು ಬಂದಿದ್ದು, ಹಂತ- ಹಂತವಾಗಿ ಕಡಿವಾಣ ಹಾಕಲಾಗುವುದು. ಪೊಲೀಸ್‌ ಠಾಣೆಗಳನ್ನು ಜನಸ್ನೇಹಿಯಾಗಿಸಲಾಗುವುದು. ದೂರು ಹೊತ್ತು ಬಂದವರ ಸಮಸ್ಯೆಗಳನ್ನು ಪೊಲೀಸ್‌ ಸಿಬ್ಬಂದಿ ಆಲಿಸಿದಲ್ಲಿ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್‌ ಸಿಬ್ಬಂದಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ವರ್ತಿಸುವಂತೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಮನೆ ಕಳವು ಪ್ರಕರಣಕ್ಕೆ ಕಡಿವಾಣ ಹಾಕಲು 57 ನೈಟ್‌ ಬೀಟ್‌ ವ್ಯವಸ್ಥೆ ಮಾಡಲಾಗಿದೆ. 599 ಬೀಟ್‌ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಕಳವು ತಡೆಗೆ ಲಾಕ್‌ಹೌಸ್‌ ರಿಜಿಸ್ಟರ್‌ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಮನೆಯವರು ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಮಾಹಿತಿ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

Advertisement

ಜಿಲ್ಲೆಯಲ್ಲಿ ಸಿವಿಲ್‌ ಪ್ರಕರಣ, ಪೋಕ್ಸೋ ಪ್ರಕರಣ ಹಾಗೂ 3ರಿಂದ 4 ಬಾಲ್ಯವಿವಾಹ ಪ್ರಕರಣ ಕಂಡುಬಂದಿದ್ದು, ನಿಯಂತ್ರಣಕ್ಕೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು. ಚಿಕ್ಕಮಗಳೂರು ನಗರದಲ್ಲಿ ವಾಹನ ಸಂಚಾರ ಸಮಸ್ಯೆ ಇದ್ದು ಕೆಲವು ಮಾರ್ಪಾಡುಗಳನ್ನು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next