Advertisement

1,632 ರೈತರಿಗೆ ಸಿಕ್ಕಿಲ್ಲ ಕೊಳೆರೋಗ ಪರಿಹಾರಧನ

11:37 PM Sep 29, 2019 | Sriram |

ಸುಳ್ಯ: ಕಳೆದ ವರ್ಷ ಅಡಿಕೆ ಕೊಳೆರೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ತಾಲೂಕಿನ 1,632 ಮಂದಿಗೆ ಪರಿಹಾರಧನ ಇನ್ನೂ ಪಾವತಿ ಆಗಿಲ್ಲ.

Advertisement

ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿಲ್ಲ ಎಂಬ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಧಾರ್‌ ಲಿಂಕ್‌ ಮಾಡಿಸಿದ ಬಳಿಕವು ಖಾತೆಗೆ ಹಣ ಬಂದಿಲ್ಲ ಎಂದು ಕೆಲವು ಅರ್ಜಿದಾರರು ದೂರಿದ್ದಾರೆ.

ಬಾಕಿ/ಪಾವತಿ ವಿವರ
2018-19ನೇ ಸಾಲಿನಲ್ಲಿ ತಾಲೂಕಿನಲ್ಲಿ ಕೊಳೆರೋಗ ಪರಿಹಾರಕ್ಕೆ ಸಂಬಂಧಿಸಿ 12,311 ಅರ್ಜಿ ಸಲ್ಲಿಕೆ ಆಗಿದ್ದವು. ಇದರಲ್ಲಿ 11,219 ಮಂದಿಗೆ ಪರಿಹಾರ ಹಣ ಮಂಜೂರಾಗಿದೆ. ತಾಂತ್ರಿಕ ಕಾರಣಗಳಿಂದ 1,632 ಮಂದಿಗೆ ಹಣ ಪಾವತಿ ಆಗಿಲ್ಲ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ. ಗ್ರಾಮ ಲೆಕ್ಕಾಧಿಕಾರಿ ವ್ಯಾಪ್ತಿಯಲ್ಲಿ ಲಾಗಿನ್‌ಗೆ ಅವಕಾಶ ನೀಡಿರುವ ಕಾರಣ ಅರ್ಜಿ ಸಲ್ಲಿಕೆ ವಿವರ ಬಿಟ್ಟು, ಪಾವತಿ ಆಗಿರುವ ವಿವರಗಳು ತೋಟಗಾರಿಕೆ ಅಥವಾ ಕೃಷಿ ಇಲಾಖೆಯಲ್ಲಿ ದಾಖಲಾಗುವುದಿಲ್ಲ. ಹೀಗಾಗಿ ಪರಿಹಾರ ಹಣ ಜಮೆ ಮಾಹಿತಿಗೆ ಅರ್ಜಿದಾರರು ವಿ.ಎ. ಕಚೇರಿಗೆ ಅಲೆದಾಡಬೇಕು.

ಅರ್ಹರಿಗೆ ಸಿಗಬೇಕು
ಪ್ರತಿ ಬಾರಿಯೂ ಕೊಳೆರೋಗ ಪರಿಹಾರ ಧನ ವಿತರಣೆಯಲ್ಲಿ ಅರ್ಹರಿಗೆ ಅನ್ಯಾಯ ವಾಗುತ್ತಿದೆ. ಕಾರಣ ಬಹುತೇಕ ಗ್ರಾಮ ಗಳಲ್ಲಿ ನಷ್ಟ ಸಮೀಕ್ಷೆ ಮಾಡದೆ ಪರಿಹಾರ ಮೊತ್ತ ನಿಗದಿ ಮಾಡಲಾಗುತ್ತದೆ. ಪಹಣಿಯಲ್ಲಿ ಅಡಿಕೆ ತೋಟ ವಿಸ್ತೀರ್ಣ ಆಧರಿಸಿ ಅದಕ್ಕೆ ತಕ್ಕಂತೆ ನಷ್ಟ ಅಂದಾಜಿಸಲಾಗುತ್ತದೆ. ಹೆಚ್ಚು ವಿಸ್ತೀರ್ಣ ಇರುವವರಿಗೆ ಹೆಚ್ಚು, ಕಡಿಮೆ ಇರುವವರಿಗೆ ಕಡಿಮೆ ಮೊತ್ತ ಸಿಗುತ್ತದೆ. ಸಣ್ಣ ಕೃಷಿಕರಿಗೆ ಅಲ್ಪ ಸಹಾಯಧನ ಸಿಗುತ್ತದೆ. ಹೀಗಾಗಿ ಪಹಣಿ ವಿಸ್ತೀರ್ಣ ಆಧರಿಸುವ ಬದಲು ತಳಮಟ್ಟದ ಸಮೀಕ್ಷೆ ಮಾಡಿ ನಿಜವಾದ ನಷ್ಟ ಅಂದಾಜಿಸಿ ಅರ್ಹರಿಗೆ ಗರಿಷ್ಠ ಸಹಾಯಧನ ನೀಡಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ
ವ್ಯಾಪ್ತಿಯಲ್ಲಿ ಲಾಗಿನ್‌
ಒಟ್ಟು 1,632 ಫಲಾನುಭವಿಗಳ ಪಟ್ಟಿ ತಯಾರಿಸಿ ಆಯಾ ಗ್ರಾ.ಪಂ.ಗೆ ಕಳುಹಿಸಿ ಆಧಾರ್‌ಲಿಂಕ್‌ ಮಾಡುವಂತೆ ತೋಟಗಾರಿಕೆ ಇಲಾಖೆ ವತಿಯಿಂದ ಕೋರಲಾಗಿತ್ತು. ಅರ್ಜಿಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಅಪ್‌ ಲೋಡ್‌ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಲಾಗಿನ್‌ ನೀಡಿರುವ ಕಾರಣ ದಾಖಲೆ ಗಳನ್ನು ನೀಡಿದ ಬಳಿಕವೂ ಪರಿಹಾರ ಸಿಗದಿರುವ ವಿವರ ಇನ್ನೂ ಸಿಕ್ಕಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳು ಈ ಮಾಹಿತಿಯನ್ನು ತೋಟಗಾರಿಕೆ ಇಲಾಖೆಗೆ ನೀಡಿದ ಬಳಿಕವೇ ವಿವರ ಸಿಗಲು ಸಾಧ್ಯವಿದೆ.

Advertisement

ಆಧಾರ್‌ ಲಿಂಕ್‌ ಮಾಡಲು ಗ್ರಾ.ಪಂ.ಗೆ ಪಟ್ಟಿ ರವಾನೆ
ಆಧಾರ್‌ ಲಿಂಕ್‌ ಆಗದಿರುವುದರಿಂದ 1,632 ಮಂದಿಗೆ ಕೊಳೆರೋಗ ಪರಿಹಾರಧನ ಮೊತ್ತ ಜಮೆ ಆಗಿಲ್ಲ. ಈ ಬಗ್ಗೆ ಜು. 20ರಂದು ತಹಶೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಫಲಾನುಭವಿ ಪಟ್ಟಿಯನ್ನು ಆಯ ಗ್ರಾ.ಪಂ.ಗೆ ಕಳುಹಿಸಿ ಆಧಾರ್‌ ಲಿಂಕ್‌ಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಅದಾದ ಬಳಿಕ ಎಷ್ಟು ಜನರಿಗೆ ಪರಿಹಾರ ಧನ ಸಿಗಲು ಬಾಕಿ ಇದೆ ಎಂಬ ಪಟ್ಟಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಿಂದ ಸಿಗಬೇಕಿದೆ.
– ಸುಹಾನಾ,
ತೋಟಗಾರಿಕೆ ಇಲಾಖೆ ಅಧಿಕಾರಿ

ಈ ಬಾರಿ ಅರ್ಜಿ ಸ್ವೀಕಾರ ಆರಂಭ
ಪ್ರತಿ ವರ್ಷ ಕೊಳೆರೋಗದಿಂದ ಶೇ. 33 ಮೇಲ್ಪಟ್ಟ ನಷ್ಟ ಸಂಭವಿಸಿದ ಪ್ರದೇಶದ ಬೆಳೆಗಾರರಿಂದ ಪರಿಹಾರಧನಕ್ಕೆ ಅರ್ಜಿ ಸ್ವೀಕರಿಸಲಾಗುತ್ತದೆ. ವರ್ಷಂಪ್ರತಿ ಸರಕಾರ ಸುತ್ತೋಲೆ ಹೊರಡಿಸುವುದಿಲ್ಲ. ನಷ್ಟ ಆಧರಿಸಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಈ ವರ್ಷ ಕೊಳೆರೋಗಕ್ಕೆ ಸಂಬಂಧಿಸಿ ಶೇ. 33ಕ್ಕೂ ಅಧಿಕ ಫಸಲು ನಷ್ಟ ಹೊಂದಿರುವ ಬೆಳೆಗಾರರು ಪರಿಹಾರಧನಕ್ಕೆ ಅರ್ಜಿ ಸಲ್ಲಿಸಬಹುದು. ಆಯಾ ತೋಟಗಾರಿಕೆ, ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ದಾಖಲೆದೊಂದಿಗೆ ಅರ್ಜಿ ಸಲ್ಲಿಸಬಹುದು. ಪ್ರತಿ ಹೆಕ್ಟೇರಿಗೆ 18 ಸಾವಿರ ರೂ. ಪರಿಹಾರಧನ ನೀಡಲಾಗುತ್ತದೆ ಎನ್ನುತ್ತಾರೆ ದ.ಕ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್‌.ಆರ್‌. ನಾಯಕ್‌.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next