Advertisement

Lok Adalat: ಅದಾಲತ್‌ನಲ್ಲಿ 16,305 ಪ್ರಕರಣ ಇತ್ಯರ್ಥ

01:15 PM Sep 14, 2023 | Team Udayavani |

ಚಾಮರಾಜನಗರ: ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಪ್ರಕರಣ ಇತ್ಯರ್ಥವಾಗಬೇಕು ಎಂಬ ಸದುದ್ದೇಶದಿಂದ ಸೆ. 9ರಂದು ನಡೆದ ಮೆಗಾ ಲೋಕ್‌ ಅದಾಲತ್‌ ನಲ್ಲಿ ಜಿಲ್ಲೆಯಲ್ಲಿ ಒಟ್ಟು 16,305 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌. ಭಾರತಿ ತಿಳಿಸಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ ನಲ್ಲಿ 2,431 ನ್ಯಾಯಾಲಯದ ಪ್ರಕರಣಗಳು ಹಾಗೂ 13,604 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟಾರೆ 16,035 ಪ್ರಕರಣಗಳು ಬಗೆಹರಿದಿವೆ. ಒಟ್ಟು 7.72 ಕೋಟಿ ರೂ. ನಷ್ಟು ದಂಡ ವಸೂಲಿ, ಪರಿಹಾರ, ವಿಮೆ ಮೌಲ್ಯ ಒಳಗೊಂಡಿದೆ ಎಂದರು.

ಚಾಮರಾಜನಗರ ತಾಲೂಕಿನಲ್ಲಿ 804 ನ್ಯಾಯಾಲಯದ ಪ್ರಕರಣಗಳು, 7,654 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 8,458 ಪ್ರಕರಣಗಳು ಇತ್ಯರ್ಥಗೊಂಡಿವೆ. ಯಳಂದೂರು ತಾಲೂಕಿನಲ್ಲಿ 236 ನ್ಯಾಯಾಲಯದ ಪ್ರಕರಣಗಳು, 858 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 1,094 ಪ್ರಕರಣಗಳು ಇತ್ಯರ್ಥಗೊಂಡಿವೆ.

ಕೊಳ್ಳೇಗಾಲ ತಾಲೂಕಿನಲ್ಲಿ 1,148 ನ್ಯಾಯಾಲಯದ ಪ್ರಕರಣಗಳು, 3,732 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 4,880 ಪ್ರಕರಣಗಳು ಇತ್ಯರ್ಥ ಗೊಂಡಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ 243 ನ್ಯಾಯಾಲಯದ ಪ್ರಕರಣಗಳು, 1,360 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 1,603 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.

ಜುಲೈ 8ರಂದು ನಡೆದ ಲೋಕ್‌ ಅದಾಲತ್‌ ನಲ್ಲಿ ಇತ್ಯರ್ಥವಾದ ಪ್ರಕರಣಗಳಿಗಿಂತ ಸೆ. 9ರಂದು ನಡೆದ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ವಿಲೇವಾರಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ತಗ್ಗಿದೆ. ಲೋಕ ಅದಾಲತ್‌ ಯಶಸ್ಸಿಗೆ ಶ್ರಮಿಸಿದ ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪೊಲೀಸ್‌, ಕಂದಾಯ, ಅಬಕಾರಿ, ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ಇತರ ಇಲಾಖೆಗಳು ಮಾಧ್ಯಮ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್‌. ಭಾರತಿ ಅವರು ತಿಳಿಸಿದರು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿ ಎನ್‌.ಕೆ. ವಿರೂಪಾಕ್ಷ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದಾಂಪತ್ಯ ಕಲಹದ 3 ದಾವೆ ಇತ್ಯರ್ಥ: ಲೋಕ್‌ ಅದಾಲತ್‌ ನಲ್ಲಿ 20 ವರ್ಷಕ್ಕೂ ಹೆಚ್ಚಿನ ಲಿಟಿಗೇಶನ್‌ ಪ್ರಕರಣವೊಂದು ರಾಜಿಯಿಂದ ಬಗೆ ಹರಿದಿದೆ. ಅಲ್ಲದೇ ದಾಂಪತ್ಯ ಕಲಹದ 3 ವ್ಯಾಜ್ಯ ಪೂರ್ವ ಪ್ರಕರಣಗಳು ಸಹ ಇತ್ಯರ್ಥವಾಗಿದೆ. ಇದರಲ್ಲಿ ಚಾಮರಾಜನಗರದಲ್ಲಿ 2, ಕೊಳ್ಳೇಗಾಲದ 1 ಪ್ರಕರಣ ಸೇರಿವೆ. ಈ ಎಲ್ಲಾ ಪ್ರಕರಣಗಳು ಒಮ್ಮತದಿಂದ ತೀರ್ಮಾನವಾಗಿರುವುದು ಲೋಕ್‌ ಅದಾಲತ್‌ ನ ವಿಶೇಷ ಎನಿಸಿದೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್‌. ಭಾರತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next