Advertisement

162 ಕೆರೆ ಸಮಗ್ರ ಅಭಿವೃದ್ಧಿ

04:07 PM Jan 22, 2020 | Team Udayavani |

ಬಾಗಲಕೋಟೆ: ನರೇಗಾ ಯೋಜನೆಯಡಿ ಕೆರೆ, ಶಾಲಾ ಆಟದ ಮೈದಾನ, ಶಾಲಾ ಕಂಪೌಂಡ್‌, ಕುರಿ ದೊಡ್ಡಿ, ಕೃಷಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಪ್ರತಿದಿನ 12 ಸಾವಿರದಿಂದ 15ಸಾವಿರದವರೆಗೆ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದಾಗಿ ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯಡಿ 38.85 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಒಟ್ಟು 31.45 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ. 80.96 ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯು 8ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

5044 ಕುರಿ ದೊಡ್ಡಿ: ಪ್ರಸಕ್ತ ಸಾಲಿನಲ್ಲಿ ಅನುಮೋದನೆಗೊಂಡ 5044 ಕುರಿ ದೊಡ್ಡಿಗಳ ಪೈಕಿ 1114 ಕಾಮಗಾರಿಗಳು ಪೂರ್ಣಗೊಂಡಿವೆ. 162 ಕೆರೆ ಅಭಿವೃದ್ಧಿ ಕಾಮಗಾರಿಗಳ ಪೈಕಿ 34 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. 256 ಶಾಲಾ ಕಾಂಪೌಂಡ್‌ ಕಾಮಗಾರಿಗಳ ಪೈಕಿ 66 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ 161 ಕಾಮಗಾರಿ ಪ್ರಗತಿಯಲ್ಲಿವೆ. 198 ಶಾಲಾ ಆಟದ ಮೈದಾನ ಕಾಮಗಾರಿಗಳಲ್ಲಿ 69 ಪೂರ್ಣ, 86 ಪ್ರಗತಿಯಲ್ಲಿವೆ. ನರೇಗಾ ಮತ್ತು ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವಿಕೆಯಡಿ 170 ಶಾಲಾ ಶೌಚಾಲಯ ಕಾಮಗಾರಿ ಕೈಗೊಳ್ಳಲಾಗಿದ್ದು, ಅದರಲ್ಲಿ 163 ಕಾಮಗಾರಿ ಪೂರ್ಣಗೊಂಡಿವೆ. ಇದಕ್ಕಾಗಿ 212.85 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

ಪ್ರವಾಹ; 7.89 ಕೋಟಿ ಅನುದಾನ: ನೆರೆ ಹಾವಳಿಗೆ ತುತ್ತಾದ 111 ಸಿ.ಸಿ ರಸ್ತೆ, 67 ಚರಂಡಿ, 18 ಬಸಿ ಕಾಲುವೆ, 17 ಶಾಲಾ ಕಾಂಪೌಂಡ್‌, 16 ಆಟದ ಮೈದಾನ, 12 ಚೆಕ್‌ಡ್ಯಾಂ, 12 ಸಿಡಿ, 16 ಶೌಚಾಲಯ ದುರಸ್ತಿ, 15 ಸ್ಮಶಾನ ಅಭಿವೃದ್ಧಿ, 11 ಕೃಷಿ ಹೊಂಡ ಹಾಗೂ 2 ಘನ ತ್ಯಾಜ್ಯ ವಿಲೇವಾರಿ ಸೇರಿ ಒಟ್ಟು 565 ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ ಒಟ್ಟು 789.06 ಲಕ್ಷ ರೂ. ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಗ್ರಾಮೀಣ ಕುಡಿಯುವ ನೀರು: ಜಿಲ್ಲೆಯಲ್ಲಿ ಒಟ್ಟು 790 ಶುದ್ಧ ನೀರಿನ ಘಟಕಗಳು ಅಳವಡಿಸಲಾಗಿದ್ದು, ಅವುಗಳಲ್ಲಿ 616 ಚಾಲ್ತಿಯಲ್ಲಿದ್ದು, 174 ದುರಸ್ತಿಯಲ್ಲಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಒಟ್ಟು 41 ಯೋಜನೆ ತೆಗೆದುಕೊಳ್ಳಲಾಗಿದ್ದು, ಈಗಾಗಲೇ 38 ಪೂರ್ಣಗೊಂಡಿದ್ದು, 2 ಯೋಜನೆಗಳು ಪ್ರಗತಿಯಲ್ಲಿರುತ್ತವೆ. 1 ಯೋಜನೆ ಸಾಂಕೇತಿಕವಾಗಿ ಪ್ರಾರಂಭವಾಗಿದೆ.

ಸಂಜೀವಿನಿ ಎನ್‌ಆರ್‌ಎಲ್‌ಎಂ: ಎನ್‌ಆರ್‌ಎಲ್‌ ಎಂ ಯೋಜನೆಯಡಿ 2019-20ನೇ ಸಾಲಿಗೆ ನೀಡಿದ ಭೌತಿಕ ಗುರಿಗೆ ಅನುಗುಣವಾಗಿ ಎಲ್ಲ ಚಟುವಟಿಕೆಗಳಲ್ಲಿ ಶೇ. 100 ಸಾಧನೆಯಾಗಿದ್ದು,ರಾಜ್ಯದಲ್ಲಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಈ ಯೋಜನೆಯಡಿ 260 ಗ್ರಾಮೀಣ ಯುವಕ-ಯುವತಿಯರಿಗೆ ವಿವಿಧ ಕೋರ್ಸಗಳಿಗೆ ಸ್ವ-ಉದ್ಯೋಗ ತರಬೇತಿ ಹಾಗೂ ಬ್ಯಾಂಕ್‌ ಸಾಲ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ಲಾಸಿಕ್‌ ಮುಕ್ತ ಅಭಿಯಾನದಡಿ ಜಿಲ್ಲಾ ಮಟ್ಟದಲ್ಲಿ ಒಂದು ದಿನ ಬಟ್ಟೆ ಬ್ಯಾಗ್‌ ಮೇಳ ಹಮ್ಮಿಕೊಳ್ಳಲಾಗಿತ್ತು ಎಂದರು.

Advertisement

ಗುರುಗಳು ಬಂದರು ಗುರುವಾರ: ಕಳೆದ ವರ್ಷ ಬಾಗಲಕೋಟೆ ಜಿಲ್ಲೆ ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಶೇ.75.63 ರಷ್ಟಾಗಿ ರಾಜ್ಯಕ್ಕೆ 27 ಸ್ಥಾನ ಪಡೆದಿದ್ದು, ಪ್ರಸಕ್ತ ಸಾಲಿಗೆ ಫಲಿತಾಂಶದಲ್ಲಿ ಸುಧಾರಣೆ ತರಲು ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಜಿಲ್ಲೆಯ 27 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳೆಂದು ನಿಯೋಜಿಸಿ ಆದೇಶಿಸಲಾಗಿದೆ.

ನೋಡಲ್‌ ಅಧಿಕಾರಿಗಳು ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಪ್ರತಿ ಗುರುವಾರ ಭೇಟಿ ನೀಡಲಿದ್ದಾರೆ. ಇದಕ್ಕೆ ಗುರುಗಳು ಬಂದರು ಗುರುವಾರ ಎಂದು ಹೆಸರು ಇಡಲಾಗಿದೆ. ಅಲ್ಲದೇ ಇವರು ಅನಿರೀಕ್ಷಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮೂಲಭೂತ ಸೌಲಭ್ಯಗಳನ್ನು ಹಾಗೂ ಶೈಕ್ಷಣಿಕ ಗುಣಮಟ್ಟ ಬಗ್ಗೆ ಪರಿಶೀಲಿಸಿ ಅವುಗಳ ಸುಧಾರಣೆಗೆ ಸಲಹೆ ಸೂಚನೆ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next