ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಬಿರುಸಾಗಿರುವ ಕಾರಣ ಭದ್ರಾವತಿ ತಾಲೂಕಿನ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಮೂಲಕ 1600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕಳೆದ ಎರಡು ತಿಂಗಳಿನಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಭದ್ರಾ ಜಲಾಶಯ ಭರ್ತಿಯಾಗಲು ಸುಮಾರು ಒಂದೂವರೆ ಅಡಿಯಷ್ಟು ಮಾತ್ರ ಬಾಕಿಯಿದೆ. ಗರಿಷ್ಟ 186 ಅಡಿ ಎತ್ತರದ ಜಲಾಶಯ ಪ್ರಸ್ತುತ 184.5 ಅಡಿಯಷ್ಟು ಭರ್ತಿಯಾಗಿದೆ.
ಪ್ರಸ್ತುತ ಜಲಾಶಯಕ್ಕೆ 15206 ಕ್ಯೂಸೆಕ್ ನಷ್ಟು ಒಳಹರಿವು ಇರುವ ಕಾರಣ ಜಲಾಶಯದ ಹಿತದೃಷ್ಟಿಯಿಂದ ಅಧಿಕಾರಿಗಳು ನದಿಗೆ ನೀರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ವಿಶೇಷ ಸ್ಥಾನಮಾನ ರದ್ದಾಗಿ ಇಂದಿಗೆ 2 ವರ್ಷ | ಜಮ್ಮು ಕಾಶ್ಮೀರದಲ್ಲಾದ ಬದಲಾವಣೆಗಳೇನು.?
ಬುಧವಾರ ಸಂಜೆಯಿಂದ ಮಲೆನಾಡು ಭಾಗದಲ್ಲಿ ಮಳೆ ಮತ್ತೆ ಆರಂಭಗೊಂಡಿದೆ. ಸದ್ಯ ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಅಧಿಕಾರಿಗಳು ಈಗಾಗಲೇ ಎರಡು ಹಂತದಲ್ಲಿ ಸೂಚನೆ ಸಹ ನೀಡಿದ್ದಾರೆ.