Advertisement

2 ತಿಂಗಳಲ್ಲೇ ತಮಿಳುನಾಡಿಗೆ 160 ಟಿಎಂಸಿ

04:02 PM Aug 07, 2022 | Team Udayavani |

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳು ಭರ್ತಿಯಾಗಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಎರಡೇ ತಿಂಗಳಲ್ಲಿ ದಾಖಲೆ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿದೆ.

Advertisement

ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದು, ತಮಿಳುನಾಡಿಗೆ ಆಯಾ ತಿಂಗಳು ನಿಗದಿಪಡಿಸಿದ ಟಿಎಂಸಿ ನೀರಿಗಿಂತಲೂ ಹೆಚ್ಚುವರಿ ನೀರು ಹರಿದು ಹೋಗಿರುವ ಬಗ್ಗೆ ದಾಖಲಾಗಿದೆ.

 160 ಟಿಎಂಸಿ ನೀರು: ಮುಂಗಾರು ಮಳೆ ಆರಂಭಗೊಂಡ ಜೂನ್‌ನಿಂದಲೂ ಆ.6ರವರೆಗೂ 160 ಟಿಎಂಸಿ ನೀರು ಹರಿದು ಹೋಗಿದೆ.  ಕೆಆರ್‌ಎಸ್‌ನಿಂದ 75ಕ್ಕೂ ಹೆಚ್ಚು ಟಿಎಂಸಿ ನೀರು ಹರಿದಿದೆ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕಿದೆ. ಆದರೆ, ಈಗಾಗಲೇ 160 ಟಿಎಂಸಿ ನೀರು ಹರಿದು ಹೋಗಿದೆ. ಜೂನ್‌ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್‌ನಲ್ಲಿ 36.76 ಟಿಎಂಸಿ, ಅಕ್ಟೋಬರ್‌ ನಲ್ಲಿ 20.22 ಟಿಎಂಸಿ, ನವೆಂಬರ್‌ನಲ್ಲಿ 13.78 ಟಿಎಂಸಿ, ಡಿಸೆಂಬರ್‌ನಲ್ಲಿ 7.35 ಟಿಎಂಸಿ, ಜನವರಿಯಿಂದ ಮೇವರೆಗೆ ಪ್ರತಿ ತಿಂಗಳು 2.50 ಟಿಎಂಸಿ ನೀರು ಕೊಡಬೇಕಿದೆ. ಆದರೆ, ಈಗಾಗಲೇ ಹೆಚ್ಚುವರಿಯಾಗಿಯೇ ನೀರು ಹರಿದಿದೆ.

13 ದಿನ ಗರಿಷ್ಠ ಮಟ್ಟ: ಜು.20ರಂದು ಕೆಆರ್‌ಎಸ್‌ ಜಲಾಶಯ ಗರಿಷ್ಠ ಮಟ್ಟ 124.80 ಅಡಿಗೆ ಭರ್ತಿ ಯಾಗಿತ್ತು. ಅಂದಿನಿಂದ ಆ.3ರವರೆಗೂ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಆ.4ರಂದು ಜಲಾಶಯದ ಒಳ ಹರಿವು 67712 ಕ್ಯೂಸೆಕ್‌ ಹರಿದು ಬರುತ್ತಿರುವುದರಿಂದ ಹೊರ ಹರಿವನ್ನು 68100 ಕ್ಯೂಸೆಕ್‌ಗೆ ಹೆಚ್ಚಿಸಲಾಯಿತು. ಇದರಿಂದ ಒಂದು ಅಡಿಯಷ್ಟು ಇಳಿಕೆ ಕಂಡಿದೆ.

ಒಳ ಹರಿವು ಹೆಚ್ಚಳ: ಆ.1ಕ್ಕೆ ಒಳಹರಿವು 23081 ಕ್ಯೂಸೆಕ್‌ ಇತ್ತು. ಈಗ ಪ್ರಸ್ತುತ 74726 ಕ್ಯೂಸೆಕ್‌ ಹರಿದು ಬರುತ್ತಿದೆ. ಇದರಿಂದ ಹೊರಹರಿವನ್ನು 78316 ಕ್ಯೂಸೆಕ್‌ಗೆ ಏರಿಸಲಾಗಿದೆ. ಆ.2ರಂದು 30505 ಕ್ಯೂಸೆಕ್‌ಗೆ ಏರಿತು. 3ರಂದು ಏಕಾಏಕಿ 58062 ಕ್ಯೂಸೆಕ್‌ಗೆ ಏರಿಕೆಯಾಯಿತು. 4ರಂದು 68586 ಕ್ಯೂಸೆಕ್‌ ಹರಿದು ಬರುತ್ತಿತ್ತು. ಇದರಿಂದ ಹೊರಹರಿವನ್ನು 80 ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿತ್ತು.

Advertisement

ಕಳೆದ ವರ್ಷವೂ ಹೆಚ್ಚುವರಿ ನೀರು: ಕಳೆದ ವರ್ಷವೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದಿತ್ತು. ಸುಮಾರು 100 ಟಿಎಂಸಿ ಹೆಚ್ಚುವರಿ ನೀರು ಹರಿದು ಹೋಗಿತ್ತು. 177.25 ಟಿಎಂಸಿಗಿಂತ 275 ಟಿಎಂಸಿ ನೀರು 2021 ಜೂನ್‌ನಿಂದ 2022ರ ಮೇ ಅಂತ್ಯದವರೆಗೂ ಹರಿದಿತ್ತು. 4 ವರ್ಷದಿಂದ ತಣ್ಣಗಾದ ವಿವಾದ: ಕಳೆದ 4 ವರ್ಷಗಳಿಂದ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ನಡೆಯುತ್ತಿದ್ದ ವಿವಾದ ತಣ್ಣಗಾಗಿದೆ. ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾದ ನೀರು ಹೋಗುತ್ತಿರುವುದರಿಂದ ತಮಿಳುನಾಡು ಸಹ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ.

ಯೋಜನೆಗೆ ತಮಿಳುನಾಡು ಅಡ್ಡಿ : ಕೆಆರ್‌ಎಸ್‌ ಹಾಗೂ ಮೆಟ್ಟೂರು ಡ್ಯಾಂಗಳು ಈಗಾಗಲೇ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಸಮುದ್ರದ ಪಾಲಾ ಗುತ್ತಿದೆ. ಅದರಲ್ಲೂ ತಮಿಳುನಾಡು ಮೆಟ್ಟೂರು ಜಲಾಶಯದ ಕೆಳಭಾಗದಲ್ಲಿರುವ ಡ್ಯಾಂಗಳಿಗೆ ನೀರು ಹರಿಸುತ್ತಿದೆ. ಅದರಿಂದ ಹೆಚ್ಚುವರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ, ಕರ್ನಾಟಕಕ್ಕೆ ಮೇಕೆದಾಟು ಯೋಜನೆಗೆ ಮಾತ್ರ ತಡೆಯೊಡ್ಡುತ್ತಿದೆ. ಮೇಕೆದಾಟು ಯೋಜನೆ ಜಾರಿಯಾದರೆ ಹೆಚ್ಚುವರಿ ನೀರು ಶೇಖರಿಸಿಟ್ಟುಕೊಂಡು ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ.

 .ನಾಡಿಗೆ ಹರಿಸಬೇಕಾದ ತಿಂಗಳ ಟಿಎಂಸಿ ನೀರು : ಸುಪ್ರೀಂಕೋರ್ಟ್‌ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕಿದೆ. ಜೂನ್‌ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್‌ ನಲ್ಲಿ 36.76 ಟಿಎಂಸಿ, ಅಕ್ಟೋಬರ್‌ನಲ್ಲಿ 20.22 ಟಿಎಂಸಿ, ನವೆಂಬರ್‌ ನಲ್ಲಿ 13.78 ಟಿಎಂಸಿ, ಡಿಸೆಂಬರ್‌ನಲ್ಲಿ 7.35 ಟಿಎಂಸಿ, ಜನವರಿಯಿಂದ ಮೇ ವರೆಗೆ ಪ್ರತಿ ತಿಂಗಳು 2.50 ಟಿಎಂಸಿ ನೀರು ಹರಿಸಬೇಕಿದೆ.

ಕಾವೇರಿ ಜಲಾನಯನದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಕ್ಕೆ ಅಧಿಕ ನೀರು ಹರಿದು ಬರುತ್ತಿದೆ. ಇದರಿಂದ ನದಿಯ ಹೊರ ಹರಿವು ಹೆಚ್ಚಿಸಲಾಗಿದೆ. ತಮಿಳುನಾಡಿಗೆ ಜೂನ್‌ನಿಂದ ಇದುವರೆಗೂ 160 ಟಿಎಂಸಿ ನೀರು ಹರಿದು ಹೋಗಿದೆ. –ಶಂಕರೇಗೌಡ, ಮುಖ್ಯ ಎಂಜಿನಿಯರ್‌, ಕಾವೇರಿ ನೀರಾವರಿ ನಿಗಮ, ಮಂಡ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next