ಹೈದರಾಬಾದ್:16ವರ್ಷದ ಬಾಲಕಿಯೊಬ್ಬಳು 23 ವರ್ಷದ ಯುವಕನನ್ನು ವಿವಾಹವಾದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಈ ವಿವಾಹ ನೆರವೇರಿಸಿದ ಪುರೋಹಿತರು, ಬಾಲಕಿ ಹಾಗೂ ಯುವಕನ ಪೋಷಕರು, ಮದುಮಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಹಕ್ಕು ಆಯೋಗ ಬೇಡಿಕೆ ಇಟ್ಟಿದೆ.
ಮಕ್ಕಳ ಹಕ್ಕುಗಳ ಸಂಘಟನೆ(ಬಾಲಾಲಾ ಹಕ್ಕುಲಾ ಸಂಘಂ)ಯ ಅಚ್ಯುತ ರಾವ್ ಅವರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಹೈದರಾಬಾದ್ ಹೊರವಲಯವಾದ ಮಲ್ಕಾಜ್ ಗಿರಿ ಮೆದ್ ಚಾಲ್ ಜಿಲ್ಲೆಯ ಗುಂಡಲಾಪೋಂಚಾಪಲ್ಲಿಯ ದೇವಸ್ಥಾನವೊಂದರಲ್ಲಿ ಜೂನ್ 1ರಂದು 1ಗಂಟೆಗೆ 23 ವರ್ಷದ ಗುತ್ತಿಗೆ ಕಾಮಗಾರಿಯ ದಿನಗೂಲಿ ನೌಕರ 16ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿರುವುದಾಗಿ ಆರೋಪಿಸಿದ್ದಾರೆ.
ಯುವಕನ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವು ಹಿರಿಯರ ನೆರವಿನೊಂದಿಗೆ ದೇವಸ್ಥಾನಕ್ಕೆ ತೆರಳಿ ವಿವಾಹವಾಗಿದ್ದ. ಶಾಲಾ ಸರ್ಟಿಫಿಕೇಟ್ ಪ್ರಕಾರ ಬಾಲಕಿಯ ವಯಸ್ಸು 16ವರ್ಷ. ಈ ಘಟನೆ ಕುರಿತು ಅಚ್ಯುತ ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು ಎಂದು ತಿಳಿಸಿದೆ.
ಮದುಮಗ ಹಾಗೂ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 376ರ ಪ್ರಕಾರ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಅಚ್ಯುತ ಅವರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ದೇವಸ್ಥಾನದ ಪುರೋಹಿತರ ವಿರುದ್ಧವೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದ್ದಾರೆ. ಘಟನೆಯನ್ನು ಪೊಲೀಸರು ಖಚಿತಪಡಿಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದ್ದು, ದೇವಸ್ಥಾನದ ಪುರೋಹಿತರು, ಪೋಷಕರು, ಕೆಲವು ಹಿರಿಯರು ಹಾಗೂ ಮದುವೆ ವಿಚಾರದಲ್ಲಿ ಭಾಗಿಯಾಗಿದ್ದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಡಬ್ಲ್ಯುಒ ಸ್ವರೂಪಾ ರಾಣಿ ತಿಳಿಸಿದ್ದಾರೆ.