ದೇವದುರ್ಗ: ತಾಲೂಕಿನ ಕಂದಾಯ ಇಲಾಖೆಯಲ್ಲಿ 16 ಜನ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಖಾಲಿ ಇವೆ. ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಎರಡು ವರ್ಷದಿಂದ ಅನಧಿಕೃತವಾಗಿ ಗೈರಾಗಿದ್ದಾರೆ. ಹೀಗಾಗಿ ಗ್ರಾಮೀಣ ಜನರು ಸಣ್ಣಪುಟ್ಟ ಕೆಲಸಕ್ಕೂ ಅಲೆದಾಡುವಂತಾಗಿದೆ.
16 ಹುದ್ದೆ ಖಾಲಿ: ತಾಲೂಕಿನಲ್ಲಿM 188 ಕಂದಾಯ ಗ್ರಾಮಗಳೆಂದು ಗುರುತಿಸಲಾಗಿದೆ. ಅದರಲ್ಲಿ 39 ಸರ್ಕ್‌ಲ್ ಗಳಿದ್ದು, 45 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಮಂಜೂರಾಗಿವೆ. ಈ ಪೈಕಿ 29 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಭರ್ತಿ ಇದ್ದು, 16 ಹುದ್ದೆ ಖಾಲಿ ಇವೆ. ಒಬ್ಬ ಗ್ರಾಮ ಲೆಕ್ಕಾಧಿಕಾರಿಗೆ ನಾಲ್ಕೈದು ಗ್ರಾಮಗಳ ಜವಾಬ್ದಾರಿ ವಹಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಜನರು ಸಣ್ಣಪುಟ್ಟ ಕೆಲಸಕ್ಕೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡುಕುತ್ತ ಅಲೆಯುವಂತಾಗಿದೆ.
ಅನಧಿಕೃತ ಗೈರು: ಕಳೆದ ಎರಡು ವರ್ಷಗಳಿಂದ ಗ್ರಾಮ ಲೆಕ್ಕಾಧಿಕಾರಿಗಳಾದ ರಾಘವೇಂದ್ರ, ನಾಗರಾಜ ಇವರು ಅನಧಿಕೃತವಾಗಿ ಗೈರಾಗಿದ್ದಾರೆ. ಮೇಲಾಧಿಕಾರಿಗಳು ಎರಡು ಬಾರಿ ನೋಟಿಸ್ ನೀಡಿದ್ದರೂ ಉತ್ತರ ಬಂದಿಲ್ಲ. ಇಲಾಖೆ ನಿಯಮದಂತೆ ಮತ್ತೂಮ್ಮೆ ನೋಟಿಸ್ ನೀಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ 2ಲಕ್ಷ ಕರ ವಸೂಲಿ: ಕಂದಾಯ ಗ್ರಾಮಗಳೆಂದು ಗುರುತಿಸಿರುವ 188 ಗ್ರಾಮ ಸೇರಿ ವಾರ್ಷಿಕವಾಗಿ ಖುಷ್ಕಿ ಜಮೀನಿನ ಕರ ಕೇವಲ 2 ಲಕ್ಷ ರೂ. ಸಂಗ್ರಹವಾಗುತ್ತಿದೆ. ಕರ ವಸೂಲಿಗೆ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಭೂಮಿ ಕೇಂದ್ರದಲ್ಲಿ ಒಬ್ಬರೇ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರೈತರ ಕೆಲಸ ಕಾರ್ಯಗಳು ಭೂಮಿ ಕೇಂದ್ರಗಳ ಮೂಲಕವೇ ಆಗಬೇಕಾಗಿದೆ. ಭೂಮಿ ಕೇಂದ್ರ ಕಂದಾಯ ನಿರೀಕ್ಷಕರ 5 ಹುದ್ದೆಯಲ್ಲಿ ಒಂದು ಹುದ್ದೆ ಮಾತ್ರ ಭರ್ತಿ ಇದ್ದು, ನಾಲ್ಕು ಹುದ್ದೆ ಖಾಲಿ ಇವೆ. ಹೀಗಾಗಿ ಗ್ರಾಮೀಣ ಜನತೆ ದೇವದುರ್ಗ ಪಟ್ಟಣದಲ್ಲಿನ ಮಿನಿ ವಿಧಾನಸೌಧ ಕಚೇರಿಗೆ ಅಲೆದಾಡುವಂತಾಗಿದೆ.
ಖಾಲಿ ಹುದ್ದೆಗಳು: ತಹಶೀಲ್ದಾರ ಗ್ರೇಡ್ -2 ಹುದ್ದೆ ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ ಒಂದು ಹುದ್ದೆ, ದ್ವಿತೀಯ ದರ್ಜೆ ಸಹಾಯಕ 12 ಹುದ್ದೆಯಲ್ಲಿ 4 ಹುದ್ದೆ ಖಾಲಿ ಇವೆ. ಬೆರಳಚ್ಚುಗಾರ ಹುದ್ದೆ ಖಾಲಿ ಇದೆ. ದಫೇದಾರ ಹುದ್ದೆ ಖಾಲಿ. ಪರಿಚಾರಕ 5 ಹುದ್ದೆಗಳು ಖಾಲಿ ಇವೆ. ಕಂದಾಯ ಇಲಾಖೆಗೆ ಸಂಬಂ ಧಿಸಿದಂತೆ 95 ಹುದ್ದೆಗಳು ಮಂಜೂರಾಗಿದ್ದು, 64 ಹುದ್ದೆ ಭರ್ತಿಯಾಗಿದ್ದು, 31 ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗುತ್ತಿದೆ.
ಬಾಡಿಗೆ ಕಟ್ಟಡದಲ್ಲಿ ನಾಡಕಚೇರಿ: ತಾಲೂಕಿನ ಜಾಲಹಳ್ಳಿ ನಾಡಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಮಾಸಿಕ 9,500 ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಇನ್ನು ಅರಕೇರಾ ಗ್ರಾಮದ ನಾಡಕಚೇರಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮದಲ್ಲಿನ ಪಿಡಬ್ಲ್ಯೂಡಿ ಇಲಾಖೆ ಕಟ್ಟಡದಲ್ಲಿ ನಡೆಯುತ್ತಿದೆ. ಗಬ್ಬೂರು ನಾಡಕಚೇರಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ನಡೆಯುತ್ತಿದೆ. ನಾಡಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸಲು ತಹಶೀಲ್ದಾರ್ ಸಂಬಂಧಪಟ್ಟ ಅಧಿಕಾರಿಗೆ ಪತ್ರ ಬರೆದಿದ್ದು, ಇದುವರೆಗೆ ಸ್ಪಂದಿಸಿಲ್ಲ ಎನ್ನಲಾಗಿದೆ.
-ನಾಗರಾಜ ತೇಲ್ಕರ್