ಬಳ್ಳಾರಿ: ಬೆಂಗಳೂರಿನ ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯ ಆರೋಪಿಗಳಲ್ಲಿ ಕೆಲವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ ಬಳ್ಳಾರಿಯ ಕೇಂದ್ರ ಕಾರಾಗೃಹದ 16 ಮಂದಿಗೆ ಖೈದಿಗಳಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ.
ಬೆಂಗಳೂರು ಗಲಭೆಯ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡುತ್ತಿರುವ ವಿಚಾರ ತಿಳಿದು ಬಳ್ಳಾರಿ ಜೈಲಿನ ಸ್ಥಿತಿಗತಿಯ ಬಗ್ಗೆ ಉದಯವಾಣಿ ವಿಚಾರಿಸಿದಾಗ ಈ ಮಾಹಿತಿ ತಿಳಿದುಬಂದಿದೆ.
ಕೇಂದ್ರ ಕಾರಾಗೃಹದ 16 ಜನ ಖೈದಿಗಳಿಗೆ ಕೋವಿಡ್ ಸೋಂಕು ದೃಢವಾಗಿದೆ. ಇತ್ತೀಚೆಗೆ ಪೆರೋಲ್ ಮೇಲೆ ಹೋಗಿದ್ದ ಏಳು ಜನರು ಮತ್ತು ನಗರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲಾಗಿರುವ 9 ಜನ ಆರೋಪಿಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಎಲ್ಲ ಸೋಂಕಿತರನ್ನು ಐಸೋಲೇಷನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಗಲಭೆ: ರಾತ್ರೋರಾತ್ರಿ ಸಿಸಿಬಿ ದಾಳಿ, ಕಾರ್ಪೋರೇಟರ್ ಪತಿ ಸೇರಿ 60 ಮಂದಿಯ ಬಂಧನ
ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ 206 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಡಿಸಿಪಿ ಕುಲ್ ದೀಪ್ ಕುಮಾರ್ ಜೈನ್, ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಕಳೆದ ರಾತ್ರಿ ಹಲವೆಡೆ ದಾಳಿ ಮಾಡಿ ಕಾರ್ಪೋರೇಟರ್ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾ ಸೇರಿದಂತೆ 60 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ದಾಳಿ ಪ್ರಕರಣ ಆರೋಪಿಗಳು ಬಳ್ಳಾರಿ ಜೈಲಿಗೆ ಶಿಫ್ಟ್ ! ಕಾರಣವೇನು ಗೊತ್ತಾ?
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರಂಭದಲ್ಲಿ ಜಿಲ್ಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟಿದ್ದ ಸೋಂಕಿತರ ಸಂಖ್ಯೆ ಇದೀಗ 12 ಸಾವಿರಕ್ಕೂ ಹೆಚ್ಚು ಜನರಲ್ಲಿ ದೃಢಪಟ್ಟಿದೆ. ಜತೆಗೆ ಜಿಲ್ಲಾಧಿಕಾರಿ ಕಚೇರಿ, ಆಹಾರ, ಆರೋಗ್ಯ ಇಲಾಖೆ, ಕೃಷಿ, ಪೊಲೀಸ್ ಇಲಾಖೆಗಳಲ್ಲಿ ಹಲವಾರು ಅಧಿಕಾರಿಗಳಿಗೂ ಆವರಿಸಿದ್ದು, ಕೆಲವರು ಸೋಂಕಿಗೆ ಬಲಿಯಾಗಿದ್ದಾರೆ