ಹಾಸನ: ದೇಶದಲ್ಲಿ ಕೋವಿಡ್ 19 ಸೋಂಕಿನ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮಾ.14 ರಿಂದ 23ರವರೆಗೆ ಪಾಲ್ಗೊಂಡಿದ್ದ ಹಾಸನ ಜಿಲ್ಲೆಯ 16 ಮಂದಿಯ ವಿವರವನ್ನು ಜಿಲ್ಲಾಡಳಿತ ಕಲೆ ಹಾಕಿದೆ.
ಈ 16 ಜನರ ಪೈಕಿ 6 ಮಂದಿ ಮಾತ್ರ ಈಗ ಜಿಲ್ಲೆಯಲ್ಲಿದ್ದು ಅವರನ್ನು ತಪಾಸಣೆ ನಡೆಸಿದ್ದು ಯಾರಲ್ಲಿಯೂ ಸೋಂಕಿನ ಲಕ್ಷಣ ಪತ್ತೆಯಾಗಿಲ್ಲ. ಇನ್ನುಳಿದ 10 ಜನರಲ್ಲಿ ಮೂವರು ದೆಹಲಿಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದರೆ, ಇನ್ನು ಮೂವರು ದೆಹಲಿಯಲ್ಲಿಯೇ ಉಳಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇನ್ನುಳಿದಂತೆ ಕುಂದಾಪುರ, ವಾರಂಗಲ್, ಜಮ್ಮು – ಕಾಶ್ಮೀರದಲ್ಲಿ ತಲಾ ಒಬ್ಬೊಬ್ಬರಿದ್ದಾರೆ. ಸದ್ಯ ಹಾಸನದಲ್ಲಿರುವವರಲ್ಲಿ ಕೊರೊನಾ ರೋಗ ಲಕ್ಷಣಗಳಿಲ್ಲ. ಆದರೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೊಬೈಲ್ ಪೋನ್‌ಗಳ ಕರೆ ಆಧರಿಸಿ ಕಲೆ ಹಾಕಲಾಗಿದೆ. ಹಾಸನದ ಒಬ್ಬರು, ಕೊಡಗು ಜಿಲ್ಲೆಯ ಒಬ್ಬರು ಸೂಪರ್ವೈಸರಿ ಐಸೋ ಲೇಷನ್‌ನಲ್ಲಿದ್ದು ಅವರಲ್ಲಿಯೂ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲವೆಂದರು. ಇನ್ನು 14 ರಿಂದ 21ರವರೆಗೆ ದೆಹಲಿಗೆ ಹೋಗಿದ್ದವರ ಮಾಹಿತಿ ಇದ್ದರೆ ಅವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅಥವಾ ತಹಶೀಲ್ದಾರ್‌ರಿಗೆ ತಿಳಿಸಿದರೆ ಅವರ ಬಗ್ಗೆ ನಿಗಾ ವಹಿಸಿ ಸುರಕ್ಷತೆಗೆ ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.
179 ಕಾರ್ಮಿಕರಿಗೆ ವ್ಯವಸ್ಥೆ: ಬೇರೆ ರಾಜ್ಯದ 179 ಕಾರ್ಮಿಕರು ಹಾಗೂ ಉತ್ತರ ಕರ್ನಾಟಕದ ಕೆಲಸಗಾರರು ವಲಸೆ ಬಂದು ಹಾಸನ ಜಿಲ್ಲೆಯಲ್ಲಿ ಉಳಿದಿದ್ದವರಿಗೆ ಜಿಲ್ಲೆಯಲ್ಲೇ ಕ್ಯಾಂಪ್‌ಗ್ಳನ್ನು ಮಾಡಿ ಊಟ ವಸತಿ ಕಲ್ಪಿಸಲಾಗಿದೆ ಎಂದರು. ಬಿಪಿಎಲ್ ಕಾರ್ಡ್ ಗಳಿಗೆ ಪಡಿತರ ವಿತರಣೆ ಪ್ರಾರಂಭ ಮಾಡಿದ್ದು ಈಗಾಗಲೇ ಅರಸೀಕೆರೆ ಮತ್ತು ಬೇಲೂರು ತಾಲೂಕು ಗಳಲ್ಲಿ ವಿತರಿಸಲಾಗುತ್ತಿದೆ. ಉಳಿದ ತಾಲೂಕು ಗಳಲ್ಲಿ ಶುಕ್ರವಾರದಿಂದ ವಿತರಣೆ ಪ್ರಾರಂಭವಾಗುತ್ತದೆ. ಎರಡು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ಗೋಧಿ ಶೇಖರಿಸಿಡಲಾಗಿದೆ. ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡುವಂತಿಲ್ಲ. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದರು.
ದಿನಸಿ ಅಂಗಡಿಗಳ ಮಾಲಿಕರು ಹೋಂ ಡೆಲಿವರಿ ಮಾಡಲು ಮುಂದೆ ಬಂದಿದ್ದು, ಅಂತಹ ಅಂಗಡಿಗಳ ಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಗೆ ಬರಬಾರದು ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಬರಬಹುದು ಎಂದರು. ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಾಧಿಕಾರಿ ಡಾ.ನವೀನ್‌ಭಟ್ ಇದ್ದರು.