Advertisement

ಆಕಳ ಹೊಟ್ಟೆಯಲ್ಲಿತ್ತು 15 ಕೆಜಿ ಪ್ಲಾಸ್ಟಿಕ್‌!

05:59 PM Jun 20, 2019 | sudhir |

ಸಾಗರ: ತಾಲೂಕಿನ ತುಮರಿ ಗ್ರಾಪಂ ವ್ಯಾಪ್ತಿಯ ವಂದಗದ್ದೆ ಗ್ರಾಮದ ಕೃಷ್ಣಮೂರ್ತಿ ಎಂಬುವವರು ಸಾಕಿದ್ದ ಆಕಳಿನ ಹೊಟ್ಟೆಯಲ್ಲಿದ್ದ 15 ಕೆಜಿಗೂ ಅಧಿಕ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪಶು ವೈದ್ಯಾಕಾರಿಗಳು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ.

Advertisement

ಕೃಷ್ಣಮೂರ್ತಿ ಅವರ ಮನೆಯ ಜರ್ಸಿ ಹಸು ಮೂರು ದಿನಗಳ ಹಿಂದೆ ಕರು ಹಾಕಿತ್ತು. ಆದರೆ ಹಸುವಿನ ಹೊಟ್ಟೆ ದಪ್ಪ ಇರುವುದನ್ನು ಗಮನಿಸಿದ ಮನೆ ಮಾಲೀಕ ಇನ್ನೊಂದು ಕರು ಇರಬಹುದು ಎಂದು ಭಾವಿಸಿದ್ದರು. ಆದರೆ ಕರು ಹಾಕಿದ ಮಾರನೇ ದಿನ ಹಸುವಿನ ಆರೋಗ್ಯ ಹದಗೆಟ್ಟಿತು. ಸಾಗರದ ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಶ್ರೀಪಾದ ರಾವ್‌ ಅವರ ನೇತೃತ್ವದ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಹಸುವನ್ನು ಪರಿಶೀಲನೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ತುಂಬಿರುವುದು ಪತ್ತೆಯಾಗಿದೆ. ಮಂಗಳವಾರ ಡಾ| ದಯಾನಂದ್‌ ಹಾಗೂ ಡಾ| ಚಂದ್ರಶೇಖರ್‌ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್‌ ವಸ್ತುಗಳನ್ನು ಹೊರಗೆ ತೆಗೆಯಲಾಗಿದೆ. ಈಗ ಹಸು ಚೇತರಿಸಿಕೊಳ್ಳುತ್ತಿದೆ. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಸ್ಥಳೀಯ ಮೈತ್ರಿ ಕಾರ್ಯಕರ್ತ ರವಿ ಸಹಕರಿಸಿದರು.

ತುಮರಿಯಂತಹ ಪ್ರಕೃತಿದತ್ತವಾದ ಸ್ಥಳಕ್ಕೆ ಬೇರೆಬೇರೆ ಭಾಗದಿಂದ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರು ತಿಂಡಿ- ತಿನಿಸುಗಳನ್ನು ತಿಂದು ಪ್ಲಾಸ್ಟಿಕ್‌ ಎಲ್ಲಿ ಬೇಕಾದರಲ್ಲಿ ಎಸೆದು ಹೋಗುತ್ತಿದ್ದಾರೆ. ಇಂತಹ ಪ್ಲಾಸ್ಟಿಕ್‌ಗಳನ್ನು ಜಾನುವಾರುಗಳು ತಿಂದು ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಪ್ಲಾಸ್ಟಿಕ್‌ ನಿಯಂತ್ರಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಪಶುಪಾಲನಾ ಇಲಾಖೆಯ ಎಡಿ ಡಾ| ಎನ್‌.ಎಚ್.ಶ್ರೀಪಾದರಾವ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next