Advertisement

ಕಿದೂರು ಪಕ್ಷಿ ಗ್ರಾಮಕ್ಕೆ 158ರ ಅತಿಥಿ

12:51 PM Aug 15, 2019 | sudhir |

ನಿಶಾಚಾರಿ ವರ್ಗಗಳಿಗೆ ಸೇರಿದ ಶ್ರೀಲಂಕ ಫ್ರಾಗ್ ಮೌತ್ ಬಹಳ ಅಪರೂಪವಾಗಿ ಕಣ್ಣಿಗೆ ಬೀಳುತ್ತವೆ.ಹಗಲಿನಲ್ಲಿ ಅವುಗಳು ಎಲ್ಲಿರುತ್ತವೆ,ಹೇಗಿರುತ್ತವೆ ಎಂಬುದು ಇಂದಿಗೂ ಕುತೂಹಲಕಾರಿಯಾಗಿ ಉಳಿದಿದೆ.ಈ ಹಕ್ಕಿಗಳ ಬಗ್ಗ ವೈಜ್ಞಾನಿಕವಾಗಿ ಅಧ್ಯಯನ ನಡೆದದ್ದು ಕಡಿಮೆ.ಇದೀಗ ಕಿದೂರಿನಲ್ಲಿ ಕಂಡು ಬಂದಿರುವುದು ಕಾಸರಗೋಡಿನ ಪಕ್ಷಿ ನಿರೀಕ್ಷಕರಲ್ಲಿ ಉತ್ಸಾಹ ಮೂಡಿಸಿದೆ.

Advertisement

ಕುಂಬಳೆ : ಹಲವು ತಿಂಗಳುಗಳಿಂದ ಹುಡುಕಾಟ.ಕಿದೂರು ಪಕ್ಷಿ ಪ್ರಪಂಚಕ್ಕೆ ಮತ್ತೊಂದು ಬಾನಾಡಿಯನ್ನು ಸೇರಿಸುವ ತವಕ.ಪಕ್ಷಿ ಸಂಕುಲದ ಸಂಖ್ಯೆ ಯನ್ನು 158ಕ್ಕೇರಿಸುವ ಹಂಬಲ.ಇವೆಲ್ಲದರ ನಡುವೆ ಹಕ್ಕಿಯ ಕೂಗು ಕೇಳಿದರೂ ಸಮಾಧಾನವಿಲ್ಲ.ಕಣ್ಣಾರೆ ಕಾಣಬೇಕೆಂಬ ಉತ್ಸಾಹದಲ್ಲಿ ರಾತ್ರಿಯಲ್ಲೂ ಹುಡುಕಾಟ…!!!

ಅದು ಅಗಸ್ಟ್ ಹನ್ನೊಂದರ ಆದಿತ್ಯವಾರ.ಸಂಜೆ ಸುಮಾರು ಏಳರ ಹೊತ್ತಿಗೆ ಸ್ನಾನಕ್ಕೆಂದು ಹೊರಟಾಗ ಅದೃಷ್ಟ ಒಲಿದಿತ್ತು. ಪ್ರದೀಪ್ ಕಿದೂರು ಅವರ ಕಣ್ಣೆದುರಿಗೇ ಬಂದು ಆಸೀನವಾಗಿತ್ತು ಶ್ರೀಲಂಕ ಫ್ರಾಗ್ ಮೌತ್..!!

ಕಪ್ಪೆಯ ಮು:ಖ ಹೋಲುವುದರಿಂದ ಹಾಗೂ ಶ್ರೀಲಂಕಾದಲ್ಲಿನ ಬಿದಿರು ಕಾಡುಗಳೆಡೆಯಲ್ಲಿ ಸಾಮಾನ್ಯವಾಗಿ ಕಂಡು ಬರುವುದರಿಂದ ಹಕ್ಕಿಗೆ ಈ ಹೆಸರು.ಸಂಜೆಯಾಯಿತೆಂದರೆ ಹೊಟ್ಟೆ ತುಂಬಿಸಲು ಗೂಡಿನಿಂದ ಹೊರ ಬರುವ ಇವುಗಳಿಗೆ ನಿಶಾಸಲಭಗಳು ಹಾಗೂ ಇತರ ಸಣ್ಣಪುಟ್ಟ ಕ್ರಿಮಿಕೀಟಗಳೇ ಭೂರಿ ಭೋಜನವಾಗುತ್ತವೆ.ಸಾಧಾರಣವಾಗಿ ಗಂಡು ಹಾಗೂ ಹೆಣ್ಣು ಜೊತೆಯಾಗಿ ವಾಸಿಸುವ ಇವುಗಳು ನಿರಂತರ ಮೃದುವಾದ ವಿಸಿಲ್ ಸದ್ದನ್ನು ಹೊರಡಿಸುತ್ತವೆ.

“ನಾನು ಬಹಳ ಹತ್ತಿರದಿಂದ ಮೊಬೈಲ್ ಫೋಟೋಗ್ರಫಿ ಹಾಗೂ ವೀಡೀಯೋಗ್ರಫಿ ಮಾಡಿದೆ.ಹಕ್ಕಿಯ ಕೂಗನ್ನೂ ದಾಖಲಿಸಿದೆ.ಹಲವು ದಿನಗಳಿಂದ ಬಯಸುತ್ತಿದ್ದ ನನ್ನ ಕನಸು ನನಸಾಯಿತು.ಕಿದೂರಿನ ಪಕ್ಷಿ ಕುಟುಂಬಕ್ಕೆ ಹೊಸತೊಂದು ಸದಸ್ಯನನ್ನು ನೀಡಲು ಸಾಧ್ಯವಾಯಿತು.ಕಾಸರಗೋಡಿನಲ್ಲಿ ನನ್ನ ನಿರೀಕ್ಷಣೆಯ ಪಕ್ಷಿ ಪ್ರಬೇಧಗಳ ಸಂಖ್ಯೆಯನ್ನು 215 ಕ್ಕೆ ಹೆಚ್ಚಿಸಿದ ಸಂತಸವೂ ನನ್ನದಾಯಿತು”.ಪ್ರದೀಪ್ ಅವರ ಮಾತುಗಳಲ್ಲಿ ಸಂಶೋಧನೆಯ ಆಸಕ್ತಿ ಕಂಡುಬಂತು..!

Advertisement

ಭಾರತದ ಪಕ್ಷಿ ಪ್ರಪಂಚದಲ್ಲಿ ಎರಡು ರೀತಿಯ ಫ್ರಾಗ್ ಮೌತ್ ಗಳು ಮಾತ್ರವೇ ಕಂಡುಬರುವುದು.ಪ್ರದೀಪ್ ಅವರು ನಿರೀಕ್ಷಿಸಿದ ಶ್ರೀಲಂಕ ಫ್ರಾಗ್ ಮೌತ್ (Batrachostomus moniliger)ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡುಬರುತ್ತವೆ. ಹೊಡ್ಗಸನ್ ಫ್ರಾಗ್ ಮೌತ್ (Batrachostomus hodgsoni)ಹಿಮಾಲಯ ಹಾಗೂ ಈಶಾನ್ಯ ರಾಜ್ಯಗಳ ಪರ್ವತ ಶ್ರೇಣಿಗಳಲ್ಲಿ ಬಹಳ ಅಪರೂಪವಾಗಿ ಕಂಡುಬರುವವುಗಳು.

ಕಾಸರಗೋಡಿನ ಇರಿಯಣ್ಣಿ,ಯೇಳ್ಕಾನ,ಅರಂತೋಡು,ಮಾಣಿಮೂಲೆ ಹಾಗೂ ಪೊಸಡಿ ಗುಂಪೆಯಲ್ಲಿ ಪಕ್ಷಿ ನಿರೀಕ್ಷಕರು ಈ ಹಕ್ಕಿಯನ್ನು ನಿರೀಕ್ಷಿಸಿದ್ದರು.

ಕಿದೂರು ಪಕ್ಷಿ ಪ್ರೇಮಿ ತಂಡದ ಪರಿಸರ ಸಂರಕ್ಷಣೆಯ ವಿವಿಧ ಕಾರ್ಯಕ್ರಮಗಳಿಗೆ ನೇತ್ರತ್ವವಹಿಸುವ ಪ್ರದೀಪ್ ಕಿದೂರು ಓರ್ವ ಉರಗ ಪ್ರೇಮಿಯೂ ಹೌದು.ಕಪ್ಪೆಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ.ಕಾಸರಗೋಡಿನ ಮಂಡೂಕ ಪ್ರಪಂಚದ ಅಧ್ಯಯನಕ್ಕೆ ತಮ್ಮದೇ ಕಾಣಿಕೆ ಸಲ್ಲಿಸುತ್ತಿದ್ದಾರೆ.

– ರಾಜು ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next