ಹುಬ್ಬಳ್ಳಿ: ರಾಜ್ಯದ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಕಡಲೆಗೆ ನಾಫೆಡ್ ಸಂಸ್ಥೆ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿಗೆ 156.09 ಕೋಟಿ ರೂ. ಬಿಡುಗಡೆ ಮಾಡಿದ್ದು, ಮತ್ತೆ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕಡಲೆಗೆ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 4,875ರೂ.ನಂತೆ ಖರೀದಿಸಲಾಗುತ್ತಿದೆ. ಕೇಂದ್ರ ಸರಕಾರದ ನಾಫೆಡ್ ಸಂಸ್ಥೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳ, ಕರ್ನಾಟಕ ರಾಜ್ಯ ಸರಕಾರದ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿದೆ. ಕಡಲೆ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗುತ್ತಿಲ್ಲವೆಂದು ರಾಜ್ಯದ ಅನೇಕ ರೈತರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಕೂಡಲೇ ನಾಫೆಡ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ರಾಜ್ಯದ ರೈತರಿಂದ ಖರೀದಿಸಿದ ಕಡಲೆಗೆ ತಕ್ಷಣ ಹಣ ಸಂದಾಯ ಮಾಡುವಂತೆ ಸೂಚಿಸಿದ್ದೆ. ಇದಕ್ಕೆ ಸ್ಪಂದಿಸಿ, ಈಗಾಗಲೇ ಸಂಸ್ಥೆಯಿಂದ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳದವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಮಾರಾಟ ಮಹಾಮಂಡಳಿಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಖರೀದಿಸಿದ ಕಡಲೆಯನ್ನು ಭಾರತೀಯ ಉಗ್ರಾಣ ನಿಗಮಕ್ಕೆ ಪೂರೈಸಿ ಅದರ ಮಾಹಿತಿ ನೀಡುವಂತೆ ಈಗಾಗಲೇ ಪತ್ರ ಮುಖೇನ ತಿಳಿಸಿದ್ದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಈ ಒಡಂಬಡಿಕೆಯಂತೆಯೇ ಮಹಾಮಂಡಳಿ ಪ್ರತಿದಿನ ಖರೀದಿಸಿದ ಕಡಲೆಯನ್ನು ಉಗ್ರಾಣ ನಿಗಮಕ್ಕೆ ಪೂರೈಸಿ ಸಂಬಂಧಿಸಿದ ಮಾಹಿತಿಯನ್ನು ನಾಫೆಡ್ ಸಂಸ್ಥೆಗೆ ಸಲ್ಲಿಸಿ ಹಣ ಪಡೆದು ರೈತರ ಖಾತೆಗೆ ನಿಗದಿತ ಸಮಯದೊಳಗೆ ಹಣ ಸಂದಾಯ ಮಾಡಲು ಸೂಚಿಸಿದ್ದೇನೆಂದು ಜೋಶಿ ತಿಳಿಸಿದರು. ಈಗಾಗಲೇ ಬಿಡುಗಡೆ ಮಾಡಿರುವ ಹಣವನ್ನು ಮಹಾಮಂಡಳ ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ