Advertisement

ಶೀಘ್ರ 155 ವೈದ್ಯರ ನೇಮಕ

06:29 AM Jun 23, 2020 | Suhan S |

ಬೆಳಗಾವಿ: ರಾಜ್ಯದಲ್ಲಿರುವ ಕಾರ್ಮಿಕ ಆಸ್ಪತ್ರೆಗಳಲ್ಲಿ ಸುಮಾರು 277 ವೈದ್ಯರ ಕೊರತೆ ಇದೆ. ಈ ಸಮಸ್ಯೆಯನ್ನು ನೀಗಿಸಲು ಶೀಘ್ರದಲ್ಲಿಯೇ 155 ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಅರಬೈಲ್‌ ಶಿವರಾಮ್‌ ಹೆಬ್ಟಾರ್‌ ಹೇಳಿದರು.

Advertisement

ಇಲ್ಲಿನ ಅಶೋಕ ನಗರದಲ್ಲಿರುವ ಇ.ಎಸ್‌.ಐ. ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕಾರ್ಮಿಕ ಆಸ್ಪತ್ರೆಯಲ್ಲಿ ಒಟ್ಟು 590 ವೈದ್ಯರ ಹುದ್ದೆಗಳಿದ್ದು, 313 ಜನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಈಗಾಗಲೇ ಕೆ.ಪಿ.ಎಸ್‌.ಸಿ. ಮೂಲಕ 155 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ಪತ್ರ, ಸಿಂಧುತ್ವ ಹಾಗೂ ದಾಖಲಾತಿಗಳ ಪರಿಶೀಲನೆ ಹಂತದಲ್ಲಿ ಇದೆ. ಬರುವ 10 ರಿಂದ 15 ದಿನಗಳಲ್ಲಿ ಅವರಿಗೆ ನೇಮಕಾತಿ ಆದೇಶ ನೀಡಲಾಗುತ್ತದೆ. ವೈದ್ಯರ ಕೊರತೆ ಇರುವ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದು ಹೇಳಿದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸ್ವತ್ಛತೆಗೆ, ರೋಗಿಗಳ ಆರೈಕೆ ಮತ್ತು ಸುರಕ್ಷತೆಗೆ ಅನುವು ಮಾಡಿಕೊಡಬೇಕು. ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಕೊರತೆ ಇಲ್ಲ. ರಾಜ್ಯದಲ್ಲಿ ಈಗಾಗಲೇ ಒಂದು ವರ್ಷಕ್ಕೆ 600 ಕೋಟಿ ರೂ.ಗಳ ಔಷಧಿಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕಾರ್ಮಿಕ ಇಲಾಖೆಯಲ್ಲಿ 22 ಲಕ್ಷ ಜನ ಕಟ್ಟಡ ಕಾರ್ಮಿಕರಿದ್ದು, ಅದರಲ್ಲಿ 14 ಲಕ್ಷ ಜನರಿಗೆ ಐದು ಸಾವಿರ ಪರಿಹಾರ ಧನ ತಲುಪಿದೆ. ಕಟ್ಟಡ ಕಾರ್ಮಿಕರನ್ನು ಹೊರತುಪಡಿಸಿದರೆ, ಮನೆ ಕೆಲಸದವರು, ಅಗಸರು, ಕ್ಷೌರಿಕ, ವಾದ್ಯ, ಟೇಲರ್‌ ವೃತ್ತಿಯವರ ದಾಖಲಾತಿಗಳು ಸರ್ಕಾರದ ಬಳಿ ಲಭ್ಯವಿಲ್ಲ ಎಂದರು. ರಾಜ್ಯದ ಕಾರ್ಮಿಕ ಇಲಾಖೆಯಲ್ಲಿ ಒಟ್ಟು ಮೂರು ಒಕ್ಕೂಟಗಳಿವೆ. ಕಟ್ಟಡ ಕಾರ್ಮಿಕರ ಒಕ್ಕೂಟ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟಗಳು ಸಕ್ರಿಯವಾಗಿವೆ. ಕೇರಳದಲ್ಲಿ 26, ಚೆನೈನಲ್ಲಿ 19 ಒಕ್ಕೂಟಗಳಿವೆ ಎಂದು ಸಚಿವರು ಹೇಳಿದರು.

Advertisement

ಕಾರ್ಮಿಕ ಇಲಾಖೆಯಿಂದ ಒಂದು ಸಾವಿರ ಕೋಟಿ ರೂ. ಪರಿಹಾರಧನ ನೀಡಬೇಕಾಗಿತ್ತು. ಅದರಲ್ಲಿ ಈಗಾಗಲೇ 711 ಕೋಟಿ ಪರಿಹಾರಧನ ನೀಡಲಾಗಿದೆ. ಇಲಾಖೆಯ ನಿಯಮಾವಳಿ ಪ್ರಕಾರ ಕಾರ್ಮಿಕರು ಜಾಬ್‌ ಕಾರ್ಡ್‌ಗಳನ್ನು ನವೀಕರಣ ಮಾಡಿಕೊಳ್ಳಬೇಕು. ಆದರೆ ಯಾರೂ ಸಹ ನವೀಕರಣ ಮಾಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದ ಅವರು ಕೋವಿಡ್‌-19 ಪರಿಸ್ಥಿಯಲ್ಲಿ ಈ ಪದ್ಧತಿಯನ್ನು ಕೈಬಿಡಲಾಗಿದೆ ಎಂದರು.

ರಾಜ್ಯ ಸರಕಾರ ಕಾರ್ಮಿಕರಿಗೆ ಏನೂ ಸಹಾಯ ಮಾಡಿಲ್ಲ. ಯಾರಿಗೆ ಹಣಕಾಸು ನೆರವು ಕೊಟ್ಟಿದೆ ಹೇಳಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವ ಹೆಬ್ಟಾಳಕರ ಅವರಿಂದ ಸರಕಾರದ ಬಗ್ಗೆ ಮೆಚ್ಚುಗೆ ಮಾತುಗಳನ್ನ ನಿರೀಕ್ಷಿಸುವುದು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದರು.

ಈ ಸಂದರ್ಭದಲ್ಲಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಕಾರ್ಮಿಕ ಇಲಾಖೆ ಕಾರ್ಮಿಕ ಉಪ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ,ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ, ತರುನ್ನುಮ್‌ ಬಂಗಾರಿ, ಇ.ಎಸ್‌ .ಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ.ಪ್ರಕಾಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next