Advertisement

ಬನಹಟ್ಟಿ ಕಾಡಸಿದ್ಧೇಶ್ವರ ರಥಕ್ಕೆ 153 ವರ್ಷದ ಇತಿಹಾಸ…!

05:47 PM Sep 11, 2022 | Team Udayavani |

ರಬಕವಿ-ಬನಹಟ್ಟಿ: ಪುರಾತನ ವಸ್ತು, ಹಳೆಯ ಕಾಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳುವ ಕುತೂಹಲ ಹಲವರಿಗೆ ಬಹಳಷ್ಟಿದೆ ಅಂತೆಯೇ ಇದೇ ಸೆ. 13 ರಂದು ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಜಾತ್ರೆಯಂದು ಪಾಲ್ಗೊಳ್ಳುವ ರಥಕ್ಕೆ 153 ವರ್ಷಗಳ ಇತಿಹಾಸ.

Advertisement

ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯಂದು ನಡೆಯುವ ರಥೋತ್ಸವ ಕಾರ್ಯಕ್ರಮವು ಆಕರ್ಷಣೀಯ ಹಾಗೂ ಮನಮೋಹಕವಾದುದು. ಈ ರಥೋತ್ಸವಕ್ಕೆ ಮೆರಗು ತರುವುದು ಇಲ್ಲಿರುವ ಭವ್ಯವಾದ ರಥ, ಬಹುಶಃ ಇಂಥ ರಥ ಉತ್ತರ ಕರ್ನಾಟಕದಲ್ಲಿ ನೋಡಲು ಸಹಿತ ಸಿಗುವುದಿಲ್ಲ. ಈ ರಥವನ್ನು ಜಮಖಂಡಿ ಸಂಸ್ಥಾನದ ಮಹಾರಾಜರಾಗಿದ್ದ ಪರಶುರಾಮಭಾವು ಶಂಕರರಾವ ಪಟವರ್ಧನ ಸರ್ಕಾರ ಇವರು ಬನಹಟ್ಟಿಯ ಮಂಗಳವಾರ ಪೇಟೆ ದೈವ ಮಂಡಳಿಗೆ ಕಾಣಿಕೆಯನ್ನಾಗಿ ನೀಡಿದ್ದರು.

ಉತ್ತರ ಕರ್ನಾಟಕದಲ್ಲಿಯೇ ಇಷ್ಟು ಹಳೆಯ ರಥ ಬೇರೊಂದು ಇರಲಿಕ್ಕಿಲ್ಲ ಎನ್ನಿಸುತ್ತದೆ. ಅದು ಶ್ರೀ ಕಾಡಸಿದ್ದೇಶ್ವರರ ಕರುಣೆಯೇ ಸರಿ. ಅದು ಇನ್ನೂ ಸುಭದ್ರವಾಗಿ ಪ್ರತಿ ವರ್ಷ ಜಾತ್ರೆಯನ್ನು ಮಾಡುತ್ತಿದೆ.

ಹಿನ್ನಲೆ
ಜಾತ್ರೆಯ ಸಂದರ್ಭದಲ್ಲಿ ರಥದ ಕೊರತೆಯಿದ್ದಾಗ ಜಮಖಂಡಿಯ ಮಹಾರಾಜರು ರಥವನ್ನು ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ಜರುಗುವ ರಥೋತ್ಸವಕ್ಕೆ ಮಾತ್ರ ಉಪಯೋಗಿಸಬೇಕೆಂದು ಅದನ್ನು ತರುವ ಕಾಲಕ್ಕೆ ಬನಹಟ್ಟಿಯ ಹಿರಿಯರಿಂದ ಕರಾರು ಪತ್ರ ಬರೆಯಿಸಿಕೊಂಡು ನೀಡಿದ್ದರು. ಅದರಂತೆ ಸ್ಥಳಿಯರು ಈಗಲೂ ಅದನ್ನು ಕೇವಲ ರಥೋತ್ಸವಕ್ಕೆ ಮಾತ್ರ ಬಳಸುತ್ತಾ ಬಂದಿದ್ದಾರೆ.

ಈ ಕರಾರು ಪತ್ರವನ್ನು ಅಂದಿನ ಮಂಗಳವಾರ ಪೇಟೆಯ ದೈವದ ಮಂಡಳದ ಅಧ್ಯಕ್ಷರಾಗಿದ್ದ ಚ. ಚ. ಅಬಕಾರ ಬರೆದು ಕೊಟ್ಟು ಅದನ್ನು 23.08.1949 ರಂದು ವಶಕ್ಕೆ ತೆಗೆದುಕೊಂಡಿದ್ದರು. ಇಂದು ರಥ ಬನಹಟ್ಟಿಗೆ ಬಂದು 73 ವರ್ಷ ಗತಿಸಿವೆ. ಅಂದಿನಿಂದ ಇಂದಿನವರೆಗೂ ಈ ರಥವನ್ನು ಶ್ರೀ ಕಾಡಸಿದ್ಧೇಶ್ವರ ಜಾತ್ರೆಯ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ನೋಡಿದವರಲ್ಲಿ ಭಕ್ತಿಭಾವ ಸ್ಪುರಿಸುತ್ತದೆ.

Advertisement

ರಥವನ್ನು ಬನಹಟ್ಟಿಗೆ ತಂದ ನಂತರ ಅಂದಿನ ದೈವ ಮಂಡಳಿಯ ಅಧ್ಯಕ್ಷ ಚ. ಚ. ಅಬಕಾರ ಅವರು ದಿ. 31.08.1949 ರಲ್ಲಿ ಅಂದು ಪ್ರಕಟಗೊಳ್ಳುತ್ತಿದ್ದ ನವಯುಗ ಪತ್ರಿಕೆಯ ಮೂಲಕ ಸಮಸ್ತ ಬನಹಟ್ಟಿ ನಾಗರೀಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಿದ್ದರು. ಆ ಒಂದು ಒಕ್ಕಣಿಯಂತೆ ಇದು ಜಮಖಂಡಿ ಮಹಾರಾಜರ ರಾಜವಾಡೆಯ ವಸ್ತು ಸಂಗ್ರಹಾಲಯದಲ್ಲಿದ್ದ ಬಹುಮುಖ್ಯ ಆಸ್ತಿಗಳಲ್ಲಿ ಒಂದಾದ ಸೀಸವೆ ಕಟ್ಟಿಗೆಯಿಂದ ನಿರ್ಮಿಸಿದ ಸುಮಾರು ಎಂಬತ್ತು ವರ್ಷದಷ್ಟು ಹಳೆಯದಾದ ರಥ ಎಂದು ತಿಳಿಸಿದ್ದಾರೆ. ಇದರ ಪ್ರಕಾರ 80 ಮತ್ತು73 ಸೇರಿದಾಗ ಈ ರಥಕ್ಕೆ ಒಟ್ಟು ಅಂದಾಜು 153 ವರ್ಷ ಇತಿಹಾಸವಿದೆ ಎಂದು ಹೇಳಬಹುದಾಗಿದೆ.

`ಈ ರೀತಿಯಾದ ರಥಗಳು ನಮಗೆ ಸಿಗುವುದು ಅಪರೂಪ. ಇವು ಸದ್ಯ ಗೋಕಾಕ ಹಾಗೂ ಜಮಖಂಡಿಯ ರಾಮತೀರ್ಥದಲ್ಲಿ ಮಾತ್ರ ಇದ್ದು, ಅದರಲ್ಲೂ ಬನಹಟ್ಟಿಯಲ್ಲಿರುವ ಈ ರಥ ಅವೆರಡಕ್ಕಿಂತಲೂ ದೊಡ್ಡದಾಗಿದೆ. ಇದು ಗಡ್ಡಿ ತೇರಿನ ಲಕ್ಷಣಗಳನ್ನು ಹೊಂದಿದ್ದು ಅಪರೂಪದ ತೇರಾ(ರಥ)ಗಿದೆ. ನಾವು ಹೆಚ್ಚಾಗಿ ಮಂಟಪ ತೇರುಗಳನ್ನು ಕಾಣುತ್ತೇವೆ. ಗಡ್ಡಿ ತೇರುಗಳ ಅದಿಷ್ಠಾನ ಭಾಗಗಳಲ್ಲಿ ಶಕ್ತಿಯುತ್ತ ಪ್ರಾಣಿಗಳ ಚಿತ್ರವಿರುತ್ತದೆ, ಮಂಟಪ ಭಾಗದಲ್ಲಿ ಮೂರ್ತಿ ಸ್ಥಾಪಿಸುತ್ತಾರೆ, ಗೋಪುರ ಮತ್ತು ಕಳಸಭಾಗವನ್ನು ಇದು ಹೊಂದಿದ್ದು, ದೇವಸ್ಥಾನದ ಲಕ್ಷಣಗಳನ್ನು ಹೊಂದಿರುತ್ತವೆ. ಈ ಎಲ್ಲ ಬಹುತೇಕ ಲಕ್ಷಣಗಳು ಜಮಖಂಡಿಯ ಮಹಾರಾಜರು ಕೊಟ್ಟಂತಹ ಬನಹಟ್ಟಿಯ ಈ ರಥ ಹೊಂದಿದೆ. ಇದು ರಾಜ ಮಹಾರಾಜರ ರಥದ ಶೈಲಿಯನ್ನು ಹೊಂದಿದ್ದು, ದೇವಸ್ಥಾನದ ವಿನ್ಯಾಸದಂತೆ ಈ ರಥ ನಿರ್ಮಾಣವಾಗಿದೆ. ವಿಶೇಷವಾಗಿ ಇದು ರಾಜಮಹಾರಾಜರು ತಮ್ಮ ಅನುಕೂಲಕ್ಕಾಗಿ ನಿರ್ಮಿಸಿದ್ದು, ಜಮಖಂಡಿಯ ಪಟವರ್ಧನ ಮಹಾರಾಜರು ಇದೇ ರಥದಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಗಣೇಶೋತ್ಸವದಲ್ಲಿ ಮೆರವಣಿಗೆ ಮಾಡುತ್ತಿದ್ದರು’ ಎಂದು ಉತ್ತರ ಕರ್ನಾಟಕದ ರಥಗಳ ಕುರಿತು ಸಂಶೋಧನೆ ಮಾಡಿದ ಡಾ. ಶಿವಪ್ರಕಾಶ ತುಕ್ಕಣ್ಣವರ ಅಭಿಪ್ರಾಯಪಡುತ್ತಾರೆ.ಇದೊಂದು ಅತ್ಯಂತ ಹಳೆಯದಾದ ರಥವಾಗಿದೆ. ಇದನ್ನೂ ನೋಡಲು ಬಹಳಷ್ಟು ದೂರದಿಂದ ಭಕ್ತಾಧಿಗಳು ಆಗಮಿಸುತ್ತಾರೆ’
-ಶ್ರೀಶೈಲ ಧಬಾಡಿ ಚೇರಮನ್ನರು, ಮಂಗಳವಾರ ಪೇಟೆ ಹಟಗಾರ ದೈವ ಮಂಡಳ, ಬನಹಟ್ಟಿ

ಜಾತ್ರೆಯ ಸಂದರ್ಭದಲ್ಲಿ ಬಣ್ಣ ಹಾಗೂ ದೀಪಾಲಂಕಾರಗಳಿಂದ ಭಕ್ತರು ಕಟ್ಟಿದ ಕಂಠಮಾಲೆ ಮತ್ತು ಹೂ ಮಾಲೆಗಳಿಂದ ಶೃಂಗರಿಸಲ್ಪಡುವ ರಥ ನೋಡುಗರ ಕಣ್ಮಣ ಸೆಳೆಯುತ್ತದೆ. ನೋಡಲು ಬರುವ ಭಕ್ತರ ಭಾವ ಉಕ್ಕಿ ಬರುತ್ತದೆ. ಐತಿಹಾಸಿಕ ಹಿನ್ನಲೆಯ ರಥವು ಇಂದಿನ ಜನತೆಗೆ ಇತಿಹಾಸದ ಅನೇಕ ಸಂಗತಿಗಳನ್ನು ತಿಳಿಸುತ್ತಿದೆ. ಈ ರಥ ನಿಜವಾಗಿಯೂ ಶ್ರೀ ಕಾಡಸಿದ್ದೇಶ್ವರ ಜಾತ್ರೆಗೆ ಒಂದು ಹೆಮ್ಮೆಯೇ ಸರಿ.

ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next