ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೆ ಅಲೆ ಭೀಕರವಾಗಿ ಪರಿಣಿಸುತ್ತಿದ್ದು, ಕಳೆದ ಒಂದೇ ತಿಂಗಳಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.
ಅದರಲ್ಲೂ ಕೊರೊನಾ ಕಾಲದ 13 ತಿಂಗಳಲ್ಲಿ ಶುಕ್ರವಾರ ಅತ್ಯಧಿಕ ದಾಖಲೆಯ 1,256 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ 2020ರ ಮಾರ್ಚ್ ತಿಂಗಳಲ್ಲಿ ಕೊರೊನಾ ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟಿದ್ದ. ಈ ಮೂಲಕವೇ ಜಿಲ್ಲೆಗೆ ಮಹಾಮಾರಿ ರೋಗಿ ವಕ್ಕರಿಸಿತ್ತು. ಮೇಲಾಗಿ ಈ ಸಾವು ಕೊರೊನಾಗೆ ದೇಶದಲ್ಲೇ ದಾಖಲಾದ ಸಾವಾಗಿತ್ತು. ಆದರೂ, ದೇಶದ ಬೇರೆ ಭಾಗಗಳು, ರಾಜ್ಯದ ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ಜಿಲ್ಲೆಯಲ್ಲಿ ಕೊಂಚ ನೆಮ್ಮದಿ ಎನ್ನುವಂತೆ ಇತ್ತು. ಈಗ ಎರಡನೆ ಅಲೆ ಇಡೀ ಜಿಲ್ಲೆಯನ್ನು ತಲ್ಲಣಿಸುವಂತೆ ಮಾಡುತ್ತಿದೆ. ಸರಿಯಾಗಿ ಒಂದು ವರ್ಷದ ಬಳಿಕ ಅಂದರೆ 2021ರ ಮಾರ್ಚ್‌ದಲ್ಲೇ ಎರಡನೇ ಅಲೆ ಶುರುವಾಗಿದ್ದು, ದಿನದಿಂದ ದಿನಕ್ಕೆ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಲೇ ಇದೆ.
ಇದೇ ಏಪ್ರಿಲ್ ಒಂದೇ ತಿಂಗಳಲ್ಲಿ ಬರೋಬ್ಬರಿ 15,099 ಕೊರೊನಾ ಪಾಸಿಟಿವ್ ದೃಢಪಟ್ಟಿವೆ. ಅಷ್ಟು ಮಾತ್ರವಲ್ಲ, 122 ಮಂದಿ ಸೋಂಕಿತರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಏ.1ರಂದು ಕೇವಲ 103 ಹೊಸ ಪಾಸಿಟಿವ್ ಪ್ರಕರಣಗಳು ಮಾತ್ರವೇ ಪತ್ತೆಯಾಗಿದ್ದವು. ಆದರೆ, ಒಂದು ತಿಂಗಳ ಅಂತರದಲ್ಲಿ ಅಂದರೆ ಏ.30ಕ್ಕೆ ಇವುಗಳ ಸಂಖ್ಯೆ 1,256ಕ್ಕೆ ತಲುಪಿದೆ. ಅದೂ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕೊರೊನಾ ಪ್ರಕರಣಗಳು ಸಾವಿರ ಗಡಿದಾಟಿದ್ದು ಇದೇ ಮೊದಲು. ಹಾಗೆ ಏ.1ರಂದು ಒಟ್ಟು ಸೋಂಕಿತರ ಸಂಖ್ಯೆ 24,113 ಇತ್ತು. ಏ.30ಕ್ಕೆ ಇವುಗಳ ಸಂಖ್ಯೆ ಒಟ್ಟಾರೆ 39,212ಕ್ಕೆ ಏರಿಕೆಯಾಗಿದೆ. ಅದೇ ರೀತಿ ಜಿಲ್ಲಾದ್ಯಂತ ಕೊರೊನೆಗೆ ಬಲಿಯಾದವರ ಸಂಖ್ಯೆ ಅಂದು 344 ಇತ್ತು. ಈಗ ಏ.30ರಂದು ದೃಢಪಟ್ಟ ಆರು ಸಾವಿನ ಪ್ರಕರಣಗಳೊಂದಿಗೆ ಇವುಗಳ ಸಂಖ್ಯೆ 466ಕ್ಕೆ ಹೆಚ್ಚಳವಾಗಿದೆ.
ಆಗ 1,244 ಜನ ಸಕ್ರಿಯ ರೋಗಿಗಳು ಇದ್ದರು. ಈವಾಗ 8,394 ಮಂದಿ ಸಕ್ರಿಯ ಕೊರೊನಾ ರೋಗಿಗಳು ಜಿಲ್ಲೆ ಯಲ್ಲಿ ಇದ್ದಾರೆ. ಇನ್ನು, ಏ.1ರಂದು ಆಸ್ಪತ್ರೆಯಲ್ಲಿ 195 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಏ.30ರ ಪ್ರಕಾರ 1,513 ಜನ ಕೊರೊನಾ ಪೀಡಿತರು ಆಸ್ಪತ್ರೆಗಳಲ್ಲಿ ಇದ್ದಾರೆ. ಶುಕ್ರವಾರ ಆರು ಬಲಿ: ಶುಕ್ರವಾರ ಪತ್ತೆಯಾದ 1,256 ಹೊಸ ಪ್ರಕರಣಗಳಲ್ಲಿ ಆರು ಜನ ಸೋಂಕಿತರು ಮೃತಪಟ್ಟಿರುವುದು ಖಚಿತವಾಗಿದೆ. ಅಫಜಲಪುರ ತಾಲೂಕಿನ ಕುಲಾಲಿ ಗ್ರಾಮದ 51 ವರ್ಷದ ವ್ಯಕ್ತಿ, ಕಲಬುರಗಿಯ ವಿಠuಲ ನಗರದ 50 ವರ್ಷದ ವ್ಯಕ್ತಿ, ಆಳಂದ ಪಟ್ಟಣದ 39 ವರ್ಷದ ವ್ಯಕ್ತಿ, ಕಲಬುರಗಿಯ ಒಕ್ಕಲಗೇರಾ ಬಸವೇಶ್ವರ ದೇವಸ್ಥಾನ ಬಳಿಯ 33 ವರ್ಷದ ಯುವಕ, ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ 65 ವರ್ಷದ ವೃದ್ಧೆ, ಕಲಬುರಗಿಯ ಎಂ.ಬಿ. ನಗರದ ನಿವಾಸಿ 84 ವರ್ಷದ ವೃದ್ಧೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.