ಬೆಂಗಳೂರು:ಮೈತ್ರಿಯಿಂದ ಸೋಲಾಯಿತು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದು, 37 ಸ್ಥಾನ ಇಟ್ಟುಕೊಂಡು ನಾವೇನು ಸಿಎಂ ಮಾಡಿ ಅಂತ ಹೇಳಿಲ್ಲ ಎಂದರು. ಅಲ್ಲದೇ ತಾನು ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಘೋಷಿಸಿದರು.
ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಒತ್ತಡ ಹೇರಿದ್ದು, ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದರು.
ಕುಮಾರಸ್ವಾಮಿ ಮುಖ್ಯಮಂತ್ರಿ ಅಂತ ಹೇಳಿದ್ದು ಕಾಂಗ್ರೆಸ್ ಮುಖಂಡರು. ನಾವೇನು ಸಿಎಂ ಸ್ಥಾನ ಕೊಡಿ ಅಂತ ದುಂಬಾಲು ಬಿದ್ದಿಲ್ಲ ಎಂದರು.
ಏತನ್ಮಧ್ಯೆ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಆಗಸ್ಟ್ 20ರಿಂದ ರಾಜ್ಯಾದ್ಯಂತ ಪಾದಯಾತ್ರೆ ಆರಂಭಿಸಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ವಿವರಿಸಿದರು.
ನಂಜನಗೂಡಿನಿಂದ ಹರಿಹರದವರೆಗೆ ಮೊದಲ ಹಂತದ ಪಾದಯಾತ್ರೆ, ನಂತರ ಎರಡನೇ ಹಂತದ ಪಾದಯಾತ್ರೆ ಒಟ್ಟು 1,500 ಕಿಲೋ ಮೀಟರ್ ನಷ್ಟು ದೂರ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.