ಬೆಂಗಳೂರು: ಬಂದ್ ಹಿನ್ನೆಲೆಯಲ್ಲಿ ನಗರಾದ್ಯಂತ ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಎಸಿಪಿ, ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಒಟ್ಟು 15 ಸಾವಿರ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಭದ್ರತೆಗೆ ನಿಯೋಜನೆಗೊಂಡಿರುವ 15 ಸಾವಿರ ಪೊಲೀಸ್ ಸಿಬ್ಬಂದಿ ಕೆಎಸ್‌ಆರ್‌ಪಿ, ನಗರ ಸಶಸ್ತ್ರ ಮೀಸಲು ಪಡೆಯ ಒಟ್ಟು 50 ತುಕಡಿಗಳು ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಜಲ ವಿವಾದಗಳಿಗೆ ಸಂಬಂಧಿಸಿದಂತೆ ಅತಿ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಿರುವಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಇದಲ್ಲದೆ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೊಯ್ಸಳ ಸೇರಿದಂತೆ ಗಸ್ತು ವಾಹನಗಳು ದಿನಪೂರ್ತಿ ಸಂಚರಿಸಲಿವೆ. ವಿನಾಕಾರಣ ಗುಂಪುಗೂಡುವುದು, ಬಲವಂತವಾಗಿ ಅಂಗಡಿ, ಮುಂಗಟ್ಟು ಮುಚ್ಚಿಸುವವರನ್ನು ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ. ಜತೆಗೆ ನಗರಾದ್ಯಂತ ನಡೆಯುವ ಪ್ರತಿ ಬೆಳವಣಿಗೆಗಳು ಕಂಟ್ರೋಲ್ ರೂಮ್‌ಗೆ ತಲುಪಲಿವೆ. ಇನ್ನು ವಿಧಾನಸೌಧ, ಎಂ.ಎಸ್.ಬಿಲ್ಡಿಂಗ್, ರೈಲು ನಿಲ್ದಾಣ, ಮೆಜೆಸ್ಟಿಕ್, ಮೆಟ್ರೋ ನಿಲ್ದಾಣಗಳು ಸೇರಿ ಹೆಚ್ಚು ಜನ ಸೇರುವ ಸ್ಥಳಕಗಳಲ್ಲಿ ಬಿಗಿ ಭದ್ರತೆಗೆ ಒತ್ತು ನೀಡಲಾಗಿದೆ. ಹಾಗೇ ಮುಂಜಾಗ್ರತೆ ಕ್ರಮವಾಗಿ ಹಳೇ ರೌಡಿ ಶೀಟರ್‌ಗಳು, ಸಂಘಟನೆ ಮುಖಂಡರನ್ನು ವಶಕ್ಕೆ ಪಡೆಯುವುದಾಗಿ ಆಯುಕ್ತರು ವಿವರಿಸಿದರು.
ಶಾಲೆ, ಕಾಲೇಜಿಗೆ ರಜೆ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದ್ದೇವೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಮತ್ತು ಸುರಕ್ಷತೆ ದೃಷ್ಟಿಯಿಂದ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯ ನಿರ್ಧಾರ ತೆಗೆದುಕೊಂಡಿದ್ದೇವೆ. ಸಂಬಂಧಪಟ್ಟ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರದ ಜಿಲ್ಲಾಧಿಕಾರಿ ವಿ.ಶಂಕರ್ ಸ್ಪಷ್ಟಪಡಿಸಿದ್ದಾರೆ.