ರಾಜಸ್ಥಾನ್(ಜೈಪುರ್):ವಲಸೆ ಬಂದ ಸಾವಿರಾರು ಪಕ್ಷಗಳು ಸಂಭಾರ್ ಸರೋವರದಲ್ಲಿ ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ಸಂಭವಿಸಿದ್ದು, ಸುಮಾರು ಹತ್ತಕ್ಕೂ ಅಧಿಕ ಪ್ರಭೇದಗಳ ಸಾವಿರಾರು ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಪಕ್ಷಿಗಳ ಸಾವಿಗೆ ಕಲುಷಿತ ನೀರು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಪಕ್ಷಿಗಳ ಕರಳು ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಸುಮಾರು 1,500ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಐದು ಸಾವಿರ ಪಕ್ಷಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಿರುವುದಾಗಿ ವರದಿ ಹೇಳಿದೆ.
ಇಂತಹ ಘಟನೆಯನ್ನು ನಾವು ಯಾವತ್ತೂ ಕಂಡಿಲ್ಲ. ಸುಮಾರು 5000 ಸಾವಿರಕ್ಕೂ ಅಧಿಕ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವುದು ಆಘಾತಕಾರಿ ಘಟನೆಯಾಗಿದೆ ಎಂದು ಸ್ಥಳೀಯ ಪಕ್ಷಿ ಪ್ರಿಯ ಅಭಿನವ್ ವೈಷ್ಣವ್ ಪಿಟಿಐಗೆ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳ ಪ್ರಕಾರ, ಜೈಪುರದ ಸಂಭಾರ್ ಸಾಲ್ಟ್ ಸರೋವರದಲ್ಲಿ ಪಕ್ಷಿಗಳ ಸಾವಿನ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಈಗಗಲೇ ಸಂಭಾರ್ ಸಾಲ್ಟ್ ಸರೋವರದ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಕ್ಷಿಗಳ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಪಕ್ಷಿ ಜ್ವರವನ್ನು ಕೂಡಾ ತಳ್ಳಿಹಾಕುವಂತಿಲ್ಲ ಎಂದು ಹಿರಿಯ ಪಶು ವೈದ್ಯಾಧಿಕಾರಿ ಅಶೋಕ್ ರಾವ್ ತಿಳಿಸಿದ್ದಾರೆ.