Advertisement

1500 ಕಿ.ಮೀ ವೈಟ್‌ಟಾಪಿಂಗ್‌

09:38 AM Nov 12, 2017 | Team Udayavani |

ಬೆಂಗಳೂರು: ಮಳೆಗಾಲದಲ್ಲೂ ರಸ್ತೆಗಳು ಹಾಳಾಗದಂತೆ ರಕ್ಷಿಸಲು ನಗರದ 1500 ಕಿ.ಮೀ. ಉದ್ದದ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 415 ಕೋಟಿ ರೂ. ವೆಚ್ಚದ ವಿವಿಧ
ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಳೆಯಿಂದಾಗಿ ನಗರದ
ರಸ್ತೆಗಳು ಹಾಳಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಅದಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಹೊರ ವರ್ತುಲ ರಸ್ತೆಗಳು ಸೇರಿದಂತೆ ನಗರದ 1500 ಕಿ.ಮೀ. ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳು 30 ವರ್ಷಗಳು ಬಾಳಿಕೆ ಬರಲಿವೆ ಎಂದು ಹೇಳಿದರು.

ಇತ್ತೀಚೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾವು-ನೋವುಗಳು ಸಂಭವಿಸಿವೆ. ಅದನ್ನು ತಡೆಯುವ ಉದ್ದೇಶದಿಂದ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ನೀರು ಹರಿಯಲು ತೊಂದರೆಯಾಗಿರುವ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ನಗರದ ಸಮಗ್ರ
ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ. ನಗರದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವೂ ಸ್ವಂತ
ಮನೆ ಹೊಂದಬೇಕೆಂಬ ಕನಸನ್ನು ಕಾಂಗ್ರೆಸ್‌ ಸರ್ಕಾರ ಹೊಂದಿದ್ದು, ಆ ನಿಟ್ಟಿನಲ್ಲಿ ಈವರೆಗೆ ಸುಮಾರು 13 ಲಕ್ಷ
ಮನೆಗಳನ್ನು ಕಟ್ಟಲಾಗಿದೆ. ಈ ವರ್ಷ 3 ಲಕ್ಷ ಮನೆಗಳನ್ನು ಕಟ್ಟಿಕೊಡಲು ತೀರ್ಮಾನಿಸಲಾಗಿದೆ ಎಂದರು.

ವಸತಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳನ್ನು ರಾಜ್ಯದಲ್ಲಿಯೇ
ಮಾದರಿ ಕ್ಷೇತ್ರಗಳಾಗಿ ಪರಿವರ್ತಿಸುವ ಉದ್ದೇಶದಿಂದ ವೈಟ್‌ ಟಾಪಿಂಗ್‌ ರಸ್ತೆ, ಪಾದಚಾರಿ ಮಾರ್ಗ, ವಿದ್ಯುತ್‌
ದೀಪಾಲಂಕಾರಕ್ಕೆ 64 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ
ಯೋಜನೆ, ಎಸ್‌ಎಫ್ಸಿ, ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಡಿ ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ, ಪಾಲಿಕೆ
ಬಜಾರ್‌, ನೀರು ಸರಬರಾಜು ಘಟಕ, ಕೆಳಸೇತುವೆ, ಈಜುಕೊಳ, ಹವಾನಿಯಂತ್ರಿತ ಗ್ರಂಥಾಲಯ, ಪಾರ್ಕ್‌,
ಕ್ರೀಡಾಂಗಣ ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಿಜಯನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಸಾವಿರಾರು ಅಭ್ಯರ್ಥಿಗಳ ಅನುಕೂಲಕ್ಕಾಗಿ 2.5
ಕೋಟಿ ವೆಚ್ಚದಲ್ಲಿ ಗ್ರಂಥಾಲಯ, ಆಟದ ಮೈದಾನ ಅಭಿವೃದ್ಧೀಪಡಿಸಲಾಗುತ್ತಿದೆ. ಇದರೊಂದಿಗೆ ಕೊಳಗೇರಿಗಳಲ್ಲಿನ
ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಡವರ ಅನುಕೂಲಕ್ಕಾಗಿ ಸಂಚಾರಿ ಇಂದಿರಾ ಕ್ಯಾಂಟೀನ್‌ ನೀಡುವಂತೆ ಕೋರಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್‌, ಮೇಯರ್‌ ಸಂಪತ್‌ರಾಜ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹಾಜರಿದ್ದರು.

Advertisement

ಸಿದ್ದರಾಮಯ್ಯ ಅವರ ಸರ್ಕಾರ ದೇಶಕ್ಕೇ ಮಾದರಿಯಾಗಿದೆ. ಬಡವರು-ಶೋಷಿತರ ಪರ ನಿಲುವು ಹೊಂದಿರುವ ಸಿಎಂ, ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಶೇ.90ರಷ್ಟು ಫ‌ಲಾನುಭವಿಗಳು ಯೋಜನೆಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಸಾಧನೆಯನ್ನು ಕಾಂಗ್ರೆಸ್‌ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು.
 ●ಪ್ರಿಯಕೃಷ್ಣ, ಗೋವಿಂದರಾಜನಗರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next