Advertisement

ಬಾಂಬ್‌ ಸದ್ದಿಗೆ ಬೆಚ್ಚಿದ ವಿದ್ಯಾರ್ಥಿಗಳು; ಜಾಪೊರೀಶಿಯಾ ನಗರದಲ್ಲಿ 1,500 ಭಾರತೀಯರು

01:24 AM Feb 28, 2022 | Team Udayavani |

ಮಂಗಳೂರು: ನಮ್ಮಲ್ಲಿ ಆತಂಕ ಹೆಚ್ಚು ತ್ತಿದೆ. ಇಂದು ಬೆಳಗ್ಗೆ ಬಾಂಬ್‌ ಸದ್ದಿಗೆ ಎಚ್ಚರಗೊಂಡು ಬೆಚ್ಚಿಬಿದ್ದಿದ್ದೇವೆ. ಪದೇಪದೆ ಸೈರನ್‌ ಮೊಳಗುತ್ತಿದೆ.

Advertisement

– ಇದು ಉಕ್ರೇನ್‌ನ ಜಾಪೊರೀಶಿಯಾ ನಗರದಲ್ಲಿರುವ ಮಂಗಳೂರಿನ ವೈದ್ಯ ವಿದ್ಯಾರ್ಥಿಯೋ ರ್ವರು ರವಿವಾರ “ಉದಯವಾಣಿ’ಯೊಂದಿಗೆ ತೋಡಿಕೊಂಡ ಆತಂಕ.

ಜಾಪೊರೀಶಿಯಾ ಸ್ಟೇಟ್‌ ಮೆಡಿಕಲ್‌ ಯುನಿವರ್ಸಿ ಟಿಯಲ್ಲಿ 1,500 ಮಂದಿ ಭಾರತೀಯ ವಿದ್ಯಾರ್ಥಿಗ ಳಿದ್ದು ಅವರಲ್ಲಿ ಸುಮಾರು 1,000 ಮಂದಿ ಹಾಸ್ಟೆಲ್‌ನಲ್ಲಿ 500 ಮಂದಿ ಅಪಾರ್ಟ್‌ಮೆಂಟ್‌ಗಳಲ್ಲಿದ್ದಾರೆ.

ಸುಮಾರು 50 ಮಂದಿ ಕರ್ನಾಟಕದವರು. ರವಿವಾರದವರೆಗೆ ನಮ್ಮ ನಗರ ಹೆಚ್ಚು ಸುರಕ್ಷಿತ ಎಂಬ ಭಾವನೆ ಇತ್ತು. ಆದರೆ ರವಿವಾರ ಬೆಳಗ್ಗೆ 2 ಮತ್ತು ಮಧ್ಯಾಹ್ನ 3 ಬಾರಿ ಸ್ಫೋಟದ ಸದ್ದು ಕೇಳಿಸಿದೆ. ನಮ್ಮ ನಗರದ ಪಕ್ಕದಲ್ಲಿ ಯುರೋಪಿನ ಅತ್ಯಂತ ದೊಡ್ಡ ಪವರ್‌ ಪ್ಲಾಂಟ್‌ ಇದೆ. ಅದರ ಮೇಲೆ ರಷ್ಯಾ ದಾಳಿ ಮಾಡಬಹುದು ಎಂಬ ಸುದ್ದಿ ಹರಡಿದೆ. ಹೆಚ್ಚು ಸಮಯವನ್ನು ಬಂಕರ್‌ನಲ್ಲಿ ಕಳೆಯುತ್ತಿದ್ದೇವೆ ಎಂದು ವಿದ್ಯಾರ್ಥಿ ಹೇಳಿದ್ದಾರೆ.

ಸುರಕ್ಷೆ ಇಲ್ಲದೆ ಹೊರಡುವುದಿಲ್ಲ
ರಾಯಭಾರ ಕಚೇರಿಯವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ರವಿವಾರ “ಯಾರು ಕೂಡ ಹೊರಗೆ ಹೋಗ ಬಾರದು. ದಾಳಿ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

Advertisement

“ನಿಮ್ಮದೇ ರಿಸ್ಕ್ ನಲ್ಲಿ ಹೋಗುವುದಿದ್ದರೆ ಮಾತ್ರ ಗಡಿಯತ್ತ ಹೋಗಿ’ ಎಂದಿದ್ದಾರೆ. ನಮಗೆ ಇಲ್ಲಿ ವಾಹನ ವ್ಯವಸ್ಥೆ ಇಲ್ಲ. ನಮ್ಮ ನಗರದಲ್ಲಿದ್ದ ಸ್ಥಳೀಯ ಕೆಲವು ನಿವಾಸಿಗಳು ಪಕ್ಕದ ಲೆವಿವ್‌ ನಗರಕ್ಕೆ ಅವರದೇ ವಾಹನದಲ್ಲಿ ಹೋಗುತ್ತಿದ್ದಾರೆ. ಆದರೆ ನಮಗೆ ಜಾಪೊರೀಶಿಯಾ ಬಿಟ್ಟು ಹೋಗುವ ಧೈರ್ಯ ಕೂಡ ಇಲ್ಲ. ಸುರಕ್ಷೆಯ ಖಾತರಿ ಸಿಕ್ಕಿದರೆ ಮಾತ್ರ ಗಡಿಯತ್ತ ಹೋಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಗಡಿಯಲ್ಲಿದ್ದವರನ್ನು ಕರೆದೊಯ್ದಿದ್ದಾರೆ
ಸದ್ಯ ಗಡಿಯವರೆಗೆ ತೆರಳಿದ್ದವರನ್ನು, ಗಡಿಯ ಪಕ್ಕದಲ್ಲೇ ಇದ್ದವರನ್ನು ಭಾರತಕ್ಕೆ ಕರೆದೊಯ್ಯಲಾಗಿದೆ. ನಾವು ಗಡಿಗೆ ತಲುಪಬೇಕಾದರೆ ಹತ್ತಿರುವಿರುವುದು ಮಾಲ್ಡೋವಾ. ಅಲ್ಲಿಗೆ 800 ಕಿ.ಮೀ. ಇದೆ. ನಮ್ಮ ನಗರದಲ್ಲಿಯೂ ಮಿಲಿಟರಿ ವಾಹನಗಳ ಓಡಾಟವಿದೆ.ಆಹಾರ ಸಾಮಗ್ರಿ ಖಾಲಿಯಾಗುತ್ತಿವೆ ಎಂದಿದ್ದಾರೆ.

ಆತಂಕ ಹೆಚ್ಚುತ್ತಿದೆ: ನೈಮಿಷಾ
ಖಾರ್ಕಿವ್‌ನಲ್ಲಿರುವ ಕರ್ನಾಟಕ ಕರಾವಳಿಯ ವಿದ್ಯಾರ್ಥಿಗಳು ನಗರವನ್ನು ಸುತ್ತುವರಿದ ರಷ್ಯನ್‌ ಪಡೆಗಳ ಆಕ್ರಮಣದಿಂದ ಬೆದರಿದ್ದಾರೆ. ಮೊದಲೆರಡು ದಿನ ಸಮಸ್ಯೆಯ ಅರಿವಾಗಲಿಲ್ಲ, ಈಗ ಸಂಕಷ್ಟ ಎದುರಾಗಿದೆ.

ರವಿವಾರ ಸ್ಫೋಟಗಳು ಹೆಚ್ಚಾಗಿವೆ ಎಂದು ವೈದ್ಯ ವಿದ್ಯಾರ್ಥಿನಿ ಮೂಡು ಬಿದಿರೆಯ ಮೂಡುಮಾರ್ನಾಡಿನ ನೈಮಿಷಾ ಅಳಲು ತೋಡಿಕೊಂಡಿದ್ದಾರೆ. ಈಕೆ ಖಾರ್ಕಿವ್‌ ನ್ಯಾಶನಲ್‌ ಮೆಡಿಕಲ್‌ ಕಾಲೇಜಿಗೆ 3 ತಿಂಗಳ ಹಿಂದೆ ಪ್ರವೇಶ ಪಡೆದಿದ್ದರು. ಇದೇ ಬಂಕರ್‌ನಲ್ಲಿ ಇರುವ ವಿದ್ಯಾರ್ಥಿಗಳಲ್ಲಿ ನೈಮಿಷಾ ತಂದೆಯ ಮಿತ್ರನ ಮಗ ಉಡುಪಿಯ ರೋಹನ್‌ ಕೂಡ ಇದ್ದಾರೆ.

ದ.ಕ. ಜಿಲ್ಲೆಯ 18 ಮಂದಿ
ಉಕ್ರೇನ್‌ನಲ್ಲಿ ಸಿಲುಕಿರುವ ದ.ಕ. ಜಿಲ್ಲೆಯವರ ಸಂಖ್ಯೆ 18ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಶನಿವಾರ ಅದು 15 ಇತ್ತು.

ಮೃಣಾಲ್‌ ಇಂದು ಉಡುಪಿಗೆ ಬರುವ ಸಾಧ್ಯತೆ
ಉಡುಪಿ: ಉಕ್ರೇನ್‌ನಿಂದ ರವಿವಾರ ಸಂಜೆ ಭಾರತಕ್ಕೆ ಬಂದಿದ್ದ ವಿಮಾನದಲ್ಲಿ ಉಡುಪಿ ಉದ್ಯಾವರದ ನಿವಾಸಿ ಮೃಣಾಲ್‌ ಬಂದಿಳಿ ದಿದ್ದು, ದಿಲ್ಲಿಯ ಕರ್ನಾಟಕ ಭವನದಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಅಲ್ಲಿಂದ ಹೊರಟು ಸೋಮವಾರ ಬೆಳಗ್ಗೆ ಉಡುಪಿಗೆ ಬರುವ ಸಾಧ್ಯತೆಯಿದೆ ಎಂದು ದಿಲ್ಲಿ ಕರ್ನಾಟಕ ಭವನದ ಮೂಲಗಳು ತಿಳಿಸಿವೆ.

ಉಕ್ರೇನ್‌ನ ಐವನೊ-ಫ್ರಾನ್‌ ಕಿವಸ್ಕ್ ನ್ಯಾಶನಲ್‌ ಮೆಡಿಕಲ್‌ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ಮೃಣಾಲ್‌ ರೊಮೇನಿಯಾದಿಂದ ಹೊರಟಿದ್ದ ವಿಮಾನದಲ್ಲಿ ದಿಲ್ಲಿಗೆ ಬಂದಿದ್ದರು. ಇನ್ನೋರ್ವ ವಿದ್ಯಾರ್ಥಿ ನಿಯಮ್‌ ರಾಘವೇಂದ್ರ ರೋಮೆನಿಯಾ ಗಡಿ ದಾಟಿದ್ದಾರೆ. ಗ್ಲೆನ್‌ವಿಲ್‌, ಅನಿಫ್ರೆಡ್‌ ರಿಡ್ಲಿ, ರೋಹನ್‌ ಧನಂಜಯ ಈ ಮೂವರು ವಿದ್ಯಾರ್ಥಿ ಗಳು ಇನ್ನೂ ಉಕ್ರೇನ್‌ನಲ್ಲೇ ಇದ್ದಾರೆ. ಅನಿಫ್ರೆಡ್‌ ಹಾಗೂ ಖಾರ್ಕಿವ್‌ ವಿ.ವಿ.ಯ ಹಾಸ್ಟೆಲ್‌ ಹಾಗೂ ರೋಹನ್‌ ಖಾರ್ಕಿವ್‌ನಲ್ಲಿ ಇದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ವಿದ್ಯಾರ್ಥಿಗಳಾದ ನಂದಿನಿ ಅರುಣ್‌ ಹಾಗೂ ಅಂಕಿತಾ ಜಗದೀಶ್‌ ಪೂಜಾರಿ ಅವರು ಸದ್ಯ ಉಕ್ರೇನ್‌ನಲ್ಲಿ ಸುರಕ್ಷಿತವಾಗಿ ಇದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next