ಹಾವೇರಿ: ಜಿಲ್ಲೆಗೆ 1,500 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಲಾಗಿದೆ. ಸೆಪ್ಟೆಂಬರ್ 1ರೊಳಗಾಗಿ ಎಲ್ಲ ಕ್ರಿಯಾ ಯೋಜನೆಗಳನ್ನು ತಯಾರಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಭೂಮಿ ಪೂಜೆಗೆ ಸಿದ್ಧ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಟಾರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಲೋಕೋಪಯೋಗಿ ಇಲಾಖೆ, ಕ್ರೀಡಾ ಇಲಾಖೆ, ಮುಜರಾಯಿ ಇಲಾಖೆ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳಿಗೆ ಅನುದಾನ ಒದಗಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಬೇಕು. ಈ ಅವಧಿಯೊಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಬೇಕು. ಈ ಕುರಿತಂತೆ ಬೇಜವಾಬ್ದಾರಿ ತೋರುವ ಅಧಿಕಾರಿಗಳಿಗೆ ಜಿಲ್ಲೆಯಿಂದ ಟಿಕೆಟ್ ನೀಡಲಾಗುವುದು. ನಾನು ಕೆಲಸ ಮಾಡಲು ಆಗುವುದಿಲ್ಲ ಎಂದು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಸೂಚಿಸಿದರು. ತ್ವರಿತ ಕಾಮಗಾರಿಗಾಗಿ ಜಿಲ್ಲಾ ಮಟ್ಟದ ಪ್ಯಾಕೇಜ್ ವ್ಯವಸ್ಥೆಯನ್ನು ಬದಲಾಯಿಸಿ ತಾಲೂಕುವಾರು ಪ್ಯಾಕೇಜ್ ಮಾಡಲಾಗಿದೆ. ತುರ್ತಾಗಿ ಕಾಮಗಾರಿಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಸಾಹಿತ್ಯ ಸಮ್ಮೇಳನ: ಮಳೆ ಹಾನಿ ಕುರಿತಂತೆ ಸತತ ಒಂದು ತಿಂಗಳು ವಿಶ್ರಾಂತಿ ರಹಿತ ಕೆಲಸ ಮಾಡಬೇಕು. ನಂತರ ನವಂಬರ್ ತಿಂಗಳಲ್ಲಿ 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಜರುಗಲಿದೆ. ಮೊದಲ ಬಾರಿಗೆ ಹಾವೇರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ವಿಶೇಷವಾಗಿ 20 ಕೋಟಿ ರೂ. ಅನುದಾನ ಒದಗಿಸಿದೆ. ಈ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡಲು ಅದಿಕಾರಿಗಳು ತಮ್ಮ ಅನುಭವ, ಹಿರಿತನ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಯೂರಿಯಾ ಗೊಬ್ಬರಕ್ಕೆ ಕೊರತೆಯಿಲ್ಲ
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಇಲ್ಲ. ಸಾಕಷ್ಟು ಯೂರಿಯಾ ಗೊಬ್ಬರದ ದಾಸ್ತಾನಿದೆ. ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಟಾರ್ ತಿಳಿಸಿದರು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಭೆಯಲ್ಲಿ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ಈ ಸಂಜೆಯೊಳಗಾಗಿ 7,550 ಮೆಟ್ರಿಕ್ ಟನ್ ಯೂರಿಯಾ ಬರಲಿದೆ. ಒಂದು ವಾರದೊಳಗಾಗಿ ವಿವಿಧ ಕಂಪನಿಗಳಿಂದ 15,000 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಜಿಲ್ಲೆಗೆ ಬರಲಿದೆ. ಈಗಾಗಲೇ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ. ಯಾವ ರೈತರು ಆತಂಕಪಡುವ ಅಗತ್ಯವಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ನಿಗ ದಿತ ಪೂರೈಕೆಗಿಂತ 9000 ಸಾವಿರ ಟನ್ ಯೂರಿಯಾ ಜಿಲ್ಲೆಗೆ ಬಂದಿದೆ ಎಂದು ಹೇಳಿದರು. ಶಿಗ್ಗಾವಿಯಲ್ಲಿ ಯೂರಿಯಾ ಗೊಬ್ಬರ ಅಭಾವ ಕುರಿತಂತೆ ರೈತರಿಗೆ ಗೊಬ್ಬರದ ಅಭಾವವಾಗದಂತೆ ಕ್ರಮ ವಹಿಸಲು ಈಗಾಗಲೇ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.