ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್, ಪಿಎಸ್‌ಐ ಹಾಗೂ ಬಿಎಂಟಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಏಳು ಮಂದಿ ಸರ್ಕಾರಿ ನೌಕರರು ಸೇರಿದಂತೆ 150 ಮಂದಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಪ್ರಧಾನ ಕಚೇರಿಯ ಕಂಟ್ರೋಲ್ ರೂಮ್ ವಿಭಾಗದ ಎಎಸ್‌ಐ ನಾಗರಾಜು, ಕಾನ್‌ಸ್ಟೆಬಲ್ ರಮೇಶ್‌ಮಳ್ಳಿ, ಹಲಸೂರು ಸಂಚಾರ ಠಾಣೆಯ ಕಾನ್‌ಸ್ಟೆಬಲ್ ವಿಠಲ್ ಬ್ಯಾಕೋಡ್ ಹಾಗೂ ಇಳಕಲ್ ಪುರಸಭೆ ಕಂದಾಯ ಅಧಿಕಾರಿ ನಾಮದೇವ ಅಣ್ಣು ಲಮಾಣಿ, ವಿಜಯಪುರ ಜಿಲ್ಲೆಯ ಓತಿಹಾಳ್ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ಭೀಮ್‌ಸಿಂಗ್ ಶಂಕರ್ ರಾಥೋಡ್, ಜಿಗಣಿ ಬಿಎಂಟಿಸಿ ಘಟಕದ ಡಿಪೋ ನೌಕರ ಸೋಮಪ್ಪ ಯಮನಪ್ಪ,
ಸರ್ಕಾರಿ ಶಾಲೆ ಶಿಕ್ಷಕ ಸಂಜೀವ್ ದೊಡ್ಡಮನಿ, ಪಿಡಿಒ ಮಹೇಶ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ, ಈತನ ಆಪ್ತರಾದ ಈರಮಲ್ಲಪ್ಪ, ತುಮಕೂರಿನ ಸಿ.ಟಿ.ಬಸವರಾಜು, ದಾವಣಗೆರೆಯ ಅಮೀರ್ ಅಹಮದ್, ಅರಬ್ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಶಿವಮೊಗ್ಗ ಮೂಲದ ಅನಿಲ್ ಫ್ರಾನ್ಸಿಸ್ ಹಾಗೂ ಪಿಎಸ್‌ಐ, ಕಾನ್‌ಸ್ಟೆàಬಲ್ ಮತ್ತು ಪಿಎಸ್‌ಐ ಆಕಾಂಕ್ಷಿಗಳು ಸೇರಿ 150 ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 67.73 ಲಕ್ಷ ರೂ. ನಗದು, ಪೊಲೀಸ್ ಕಾನ್‌ಸ್ಟೆಬಲ್ ಪ್ರಶ್ನೆ ಪತ್ರಿಕೆಯ 98 ನಕಲು ಪ್ರತಿಗಳು, 138 ಅಭ್ಯರ್ಥಿಗಳ ಪ್ರವೇಶ ಪತ್ರಗಳು, 35 ಅಭ್ಯರ್ಥಿಗಳ ಅಸಲಿ ದಾಖಲೆಗಳು, 36 ಮೊಬೈಲ್, 17 ವಾಹನ, ಎರಡು ಪ್ರಿಂಟರ್, ಒಂದು ಲ್ಯಾಪ್‌ಟಾಪ್ ಹಾಗೂ ಒಂದು ಟ್ಯಾಬ್, ಖಾಲಿ ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಲಕ್ಷ ರೂ.ಗಳನ್ನು ಗ್ರಾಮೀಣ ಬ್ಯಾಂಕ್ ಒಂದರಿಂದ ಡಿಡಿ ಮೂಲಕ ಪಡೆಯಬೇಕಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕನ್ನಡ ಸಿನಿಮಾ ನಿರ್ಮಾಣ ಮಾಡಿರುವ ಆರೋಪಿ: ದಾವಣಗೆರೆ ಮೂಲದ ಆರೋಪಿ ಅಮೀರ್ ಅಹಮದ್ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ಈ ಹಿಂದೆ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ. ಈ ವೇಳೆ ಪರಿಚಯವಾದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಆರೋಪಿ ಕಳೆದ ಆರೇಳು ವರ್ಷಗಳಿಂದ ಅಕ್ರಮ ದಂಧೆಯಲ್ಲಿ ತೊಡಗಿದ್ದು, ಕೋಟ್ಯಂತರ ರೂ. ಸಂಪಾದಿಸಿದ್ದಾನೆ. ಇದೇ ಹಣದಿಂದ ಇತ್ತೀಚೆಗೆ “ಆಫ್ ಬಾಯಲ್ಡ್’ ಎಂಬ ಕನ್ನಡ ಸಿನಿಮಾ ಕೂಡ ನಿರ್ಮಾಣ ಮಾಡಿದ್ದಾನೆ ಎಂದು ಅಲೋಕ್ ಕುಮಾರ್ ಹೇಳಿದರು.