Advertisement

150 ಕಿ.ಮೀ. ನಡೆದು ಬಂದ ಕಾರ್ಮಿಕರು

04:49 PM Mar 29, 2020 | Suhan S |

ಬೆಳಗಾವಿ: ಅನೇಕ ವರ್ಷಗಳಿಂದ ಕೂಲಿ ಕೆಲಸಕ್ಕೆ ಗೋವಾಕ್ಕೆ ಹೋಗಿದ್ದ ಕಾರ್ಮಿಕರು ಕೋವಿಡ್ 19 ಭೀತಿಯಿಂದ ತವರಿಗೆ ವಾಪಸ್ಸಾಗಿದ್ದು, ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ವಾಹನ ಸೌಕರ್ಯ ಇಲ್ಲದೇ ಸುಮಾರು 150 ಕಿ.ಮೀ. ಕಾಲ್ನಡಿಗೆಯಲ್ಲಿಯೇ ಗೋವಾದಿಂದ ನಡೆದುಕೊಂಡೇ ಬಂದಕಾರ್ಮಿಕರಿಗೆ ಶನಿವಾರ ಅನ್ನ, ನೀರು ಕೊಟ್ಟು ಸಂತೈಸಲಾಯಿತು.

Advertisement

ಗೋವಾದಲ್ಲಿ ಕೋವಿಡ್ 19 ಭೀತಿಯಿಂದ ತಮ್ಮೂರಿಗೆ ವಾಪಸ್ಸಾಗಲು ವಾಹನ ಇಲ್ಲದೇ 52 ಕಾರ್ಮಿಕರ ಗುಂಪೊಂದು ಕಾಲ್ನಡಿಗೆಯಲ್ಲಿ ಆಗಮಿಸಿತು. ಗೋವಾದ ದಟ್ಟ ಅರಣ್ಯ ಮಾರ್ಗದ ಘಾಟ ಪ್ರದೇಶದ ಮೂಲಕ ಹಗಲು ರಾತ್ರಿ ಎನ್ನದೇ ನಡೆದುಕೊಂಡು ಕಾರ್ಮಿಕರು ಬರುತ್ತಿದ್ದಾರೆ. ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿರುವ ತಾಲೂಕಿನ ಹೊನ್ನಿಹಾಳ ಗ್ರಾಮಸ್ಥರು ತಮ್ಮ ಮನೆಯಲ್ಲಿದ್ದ ರೊಟ್ಟಿ, ಪಲ್ಯೆ,ಶೇಂಗಾ ಚಟ್ನಿ, ಅನ್ನ, ಸಾಂಬಾರು, ಬಿಸ್ಕೀಟ್‌, ಬ್ರೇಡ್‌ ನೀಡಿ ನೆರವಾದರು.

ಬಾಗಲಕೋಟೆ, ವಿಜಯಪುರ, ಮುದ್ದೇಬಿಹಾಳ, ರಾಯಚೂರು ಸೇರಿದಂತೆ ವಿವಿಧ ಊರುಗಳಿಗೆ ತೆರಳಲು ಕಾಲ್ನಡಿಗೆಯಲ್ಲಿಯೇ ಬಂದು, ಹೇಗಾದರೂ ಮಾಡಿ ತಮ್ಮ ಊರಿಗೆ ಹೋಗಬೇಕೆಂಬ ಪಣ ತೊಟ್ಟಿದ್ದ ಕಾರ್ಮಿಕರನ್ನು ಗೋವಾ ಸರ್ಕಾರ ವಾಹನಗಳಲ್ಲಿ ಗೋವಾ ಗಡಿವರೆಗೆ ತಂದು ಬಿಟ್ಟಿದೆ. ಗಡಿಯಿಂದ ನಾಲ್ಕು ದಿನಗಳ ಕಾಲ್ನಡಿಗೆ ಮೂಲಕ ಕಾರ್ಮಿಕರು ಶನಿವಾರ ಬೆಳಗಾವಿಗೆ ಆಗಮಿಸಿದರು.

ಮಾರ್ಗದಲ್ಲಿ ಅಲ್ಲೊಂದು ಇಲ್ಲೊಂದು ಬರುತ್ತಿದ್ದ ವಾಹನಗಳಿಗೆ ಕೈ ಮಾಡಿ ಬೇಡಿಕೊಂಡರೂ ಯಾರೊಬ್ಬರು ನೆರವಾಗಲಿಲ್ಲ. ಗೋವಾ ಗಡಿ ದಾಟಿ ಬಂದಾಗ ಕೆಲ ಗ್ರಾಮಸ್ಥರು ಇವರಿಗೆ ದೇವಸ್ಥಾನಗಳಲ್ಲಿ,ಸಮುದಾಯ ಭವನಗಳಲ್ಲಿ ವಾಸ್ತವ್ಯ ನೀಡಿ ಆಹಾರ ನೀಡಿ ನೆರವಾಗಿದ್ದಾರೆ.

ಈಗ ಬೆಳಗಾವಿಗೆ ಬರುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ, ತಾಲೂಕಿನ ಹೊನ್ನಿಹಾಳ ಗ್ರಾಮದ ಮನೆಗಳಿಂದ ಆಹಾರ ಸಂಗ್ರಹಿಸಿ, ಪೊಟ್ಟಣ ತಯಾರಿಸಿ ಎಲ್ಲರಿಗೂ ಆಹಾರ ವಿತರಿಸಿದರು. ಬಳಿಕ ಮತ್ತೆ ನಡೆದುಕೊಂಡೇ ಎಲ್ಲ ಕಾರ್ಮಿಕರು ತಮ್ಮ ಪ್ರಯಾಣ ಬೆಳೆಸಿದರು. ಜತೆಗೆ ಮಹಾರಾಷ್ಟ್ರದ ಕರಾಡ್‌ನ‌

Advertisement

ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಕರಾಡ್‌ನಿಂದ ಕೊಲ್ಲಾಪುರವರೆಗೆ ವಾಹನದಲ್ಲಿ ಆಗಮಿಸಿದ್ದಾರೆ. ನಂತರ ಕೊಲ್ಲಾಪುರದಿಂದ ಬೆಳಗಾವಿ ಮಾರ್ಗವಾಗಿ ಯಾದಗಿರಿ, ರಾಯಚೂರಿನತ್ತ ಕಾಲ್ನಡಿಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಲ್ಲಿ ವಾಸ್ತವ್ಯ ಮಾಡುತ್ತ ಕಾಲ್ನಡಿಗೆ ಮೂಲಕ ಪ್ರಯಾಣ ಬೆಳೆಸಿರುವ ಕಾರ್ಮಿಕರ ಸಹಾಯಕ್ಕೆ ಮಾರ್ಗದಲ್ಲಿನ ಗ್ರಾಮಸ್ಥರು ನೆರವಾಗುತ್ತಿದ್ದಾರೆ.

ಕಾರ್ಮಿಕರ ಆರೋಗ್ಯ ತಪಾಸಣೆ : ತಾಲೂಕಿನ ಹೊನ್ನಿಹಾಳ ಗ್ರಾಮದ ದಕ್ಷಿಣಾಭಿಮುಖೀ ಹನುಮಾನ ಮಂದಿರದ ಆವರಣದಲ್ಲಿ ಕಾರ್ಮಿಕರನ್ನು ಅಂತರದಲ್ಲಿ ನಿಲ್ಲಿಸಲಾಯಿತು. ಬಳಿಕ ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ 52 ಜನ ಕೂಲಿ ಕಾರ್ಮಿಕರಿಗೆ ಆಹಾರ ನೀಡಲಾಯಿತು. ನಂತರ ತಾಲೂಕು ಆರೋಗ್ಯಾಧಿಕಾರಿಗಳನ್ನು ಕರೆಯಿಸಿ ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಯಿತು. ಎಲ್ಲ ಆರೋಗ್ಯ ಸ್ಥಿರವಾಗಿದ್ದರಿಂದ ಅವರೂರಿಗೆ ಕಳುಹಿಸಲು ನಿರ್ಧರಿಸಲಾಯಿತು.

 ಅನೇಕ ವರ್ಷಗಳಿಂದ ಗೋವಾದಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೋವಿಡ್ 19 ಸೋಂಕಿಗೆ ಹೆದರಿ ಕಾಲ್ನಡಿಗೆಯಿಂದ ವಾಪಸ್ಸಾಗುತ್ತಿದ್ದಾರೆ. ಗೋವಾ ಗಡಿ ಭಾಗದಿಂದ ಸುಮಾರು 150 ಕಿ.ಮೀ.ವರೆಗೆ ನಡೆದುಕೊಂಡು ಬಂದ ಕಾರ್ಮಿಕರನ್ನು ಸಂತೈಸುವುದು ನಮ್ಮ ಕರ್ತವ್ಯ. ಹೀಗಾಗಿ ಹೊನ್ನಿಹಾಳ ಗ್ರಾಮಸ್ಥರು ತಮ್ಮ ಮನೆಗಳಲ್ಲಿದ್ದ ಆಹಾರವನ್ನು ನೀಡಿ ಸಹಾಯಕ್ಕೆ ನಿಂತಿದ್ದಾರೆ. ಧನಂಜಯ ಜಾಧವ, ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next